Site icon Vistara News

ಹಿರಿಯ ಪತ್ರಕರ್ತ ಡಿ. ಉಮಾಪತಿಗೆ ಕೆಯುಡಬ್ಲ್ಯೂಜೆಯ ಪ್ರತಿಷ್ಠಿತ ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ

d umapathy to Receive second kuwj ambedkar award for Journalism

ಡಿ. ಉಮಾಪತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡುವ ಪ್ರತಿಷ್ಠಿತ ʻʻಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿʼʼ ಗೆ ಹಿರಿಯ ಪತ್ರಕರ್ತ ಡಿ. ಉಮಾಪತಿ ಆಯ್ಕೆಯಾಗಿದ್ದಾರೆ.

ಸಾಮಾಜಿಕ ಕಳಕಳಿಯ, ಸಮಸಮಾಜದ ಆಶಯಗಳ ಬಿಂಬಿತ, ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳ ಸಂವೇದನಾ ಶೀಲ ಪತ್ರಕರ್ತರನ್ನು ಗುರುತಿಸಿ ಗೌರವಪೂರ್ವಕವಾಗಿ ಅಭಿನಂದಿಸುವ ಆಶಯದಿಂದ ಬಾಗಲಕೋಟೆಯ ಹಿರಿಯ ಪತ್ರಕರ್ತ ಸುಭಾಷ್ ಹೊದ್ಲೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಹಾ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯ ದತ್ತಿನಿಧಿಯನ್ನು ಸ್ಥಾಪಿಸಿದ್ದು, 2021-22 ನೇ ಸಾಲಿನಿಂದ ಈ ಪ್ರಶಸ್ತಿಯನ್ನು ವೃತ್ತಿಪರ- ಸಾಧಕ ಪತ್ರಕರ್ತರಿಗೆ ನೀಡಲಾಗುತ್ತಿದೆ.

ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಮೊದಲಿಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಗೆ ನೀಡಲಾಗಿತ್ತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಸದ್ಯದಲ್ಲೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.ಉಮಾಪತಿ ಪರಿಚಯ

ಮಾರ್ಚ್ 18,1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎಂ ಸ್ನಾತಕೋತ್ತರ ಪದವಿಯಲ್ಲಿ ಎರಡನೆ ರ‍್ಯಾಂಕ್ ಪಡೆದವರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಮೂಹ ಸಂಸ್ಥೆ ಯ ಕನ್ನಡ ಪ್ರಭ, ಈ ಟಿವಿ, ಯ ದೆಹಲಿ ಕರೆಸ್ಪಾಂಡೆಂಟ್ ಅಗಿ 27 ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರುಗಳಿಸಿದವರು. ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು , ಸುಪ್ರೀಂ ಕೋರ್ಟು ನಲ್ಲಿನ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.

ದೆಹಲಿಯಲ್ಲಿದ್ದು ರಾಷ್ಟ್ರೀಯ ಪತ್ರಕರ್ತರಾಗಿರುವ ಉಮಾಪತಿ ಅವರು ಅಂದೋಲನ , ರೈತ ಚಳವಳಿ, ವಿಜಯಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ ʻನ್ಯಾಯಪಥ(ಗೌರಿ ಮಿಡಿಯಾ)ʼ ಮತ್ತು ʻಈ ದಿನʼ ವೆಬ್ ಜರ್ನಲ್‌ನ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಂಬೇಡ್ಕರ್ ಪ್ರತಿಷ್ಠಾನದ ಭೋಧಿವರ್ಧನ ಪ್ರಶಸ್ತಿ, ಎಸ್ಸಿ/ಎಸ್ಟಿ ಎಡಿಟರ್ ಅಸೋಸಿಯೇಷನ್‌ನ ʻಬಿ. ರಾಚಯ್ಯ ಪ್ರಶಸ್ತಿ’ , ಪ್ರೆಸ್ ಕ್ಲಬ್ ಬೆಂಗಳೂರು ನ ಜೀವಮಾನಸಾಧನೆ ಪ್ರಶಸ್ತಿ, ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ನೀಡುವ ಸಂಪಾದಕ ಮಂಡಳಿ ಆಯ್ಕೆಯ ಅತ್ಯುತ್ತಮ ಶ್ರಮಜೀವಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ನ ನಾಡಿಗೇರಿ ಕಿಟ್ಟಪ್ಪ ದತ್ತಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತಿತರ ಪ್ರಶಸ್ತಿಗಳು ಇವರಿಗೆ ಸಂದಿವೆ. ʻದೆಹಲಿ ನೋಟ’ , ʻಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳಾಗಿವೆ.

ಇದನ್ನೂ ಓದಿ : Rishab Shetty: ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಸ್ವೀಕರಿಸಿದ ರಿಷಬ್​ ಶೆಟ್ಟಿ; ಪಂಚೆ ಧರಿಸಿ ಕಾರ್ಯಕ್ರಮದಲ್ಲಿ ಭಾಗಿ

Exit mobile version