ಮಂಗಳೂರು: ಯಂತ್ರಗಳನ್ನು ಬಳಸುವಾಗ ಎಷ್ಟೇ ಎಚ್ಚರಿಕೆಯನ್ನು ಹೊಂದಿದ್ದರೂ ಸಾಕಾಗುವುದಿಲ್ಲ. ಸದ್ಯ ಮರ ಕಡಿಯುವಾಗ ಆಯತಪ್ಪಿ ಕಟ್ಟಿಂಗ್ ಮಿಷನ್ (Accidental death) ಮೇಲೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಳ್ತಂಗಡಿಯ ಸಾವ್ಯ ಹೊಸಮನೆ ಎಂಬಲ್ಲಿ ಘಟನೆ ನಡೆದಿದೆ. ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (36) ಮೃತ ದುರ್ದೈವಿ.
ಪ್ರಶಾಂತ್ ತಮ್ಮ ಮನೆಯ ಮುಂದೆ ಇದ್ದ ಮರವನ್ನು ಕಡಿಯಲು ಮರವೇರಿದ್ದರು. ಕಟ್ಟಿಂಗ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಮರದ ಮೇಲಿದ್ದ ಬಿದ್ದಿದ್ದಾರೆ. ಬೀಳುವಾಗ ಕಟ್ಟಿಂಗ್ ಮೆಷಿನ್ ಚಾಲನಾ ಸ್ಥಿತಿಯಲ್ಲಿತ್ತು. ಕಟ್ಟಿಂಗ್ ಮೆಷಿನ್ ನೇರವಾಗಿ ಪ್ರಶಾಂತ್ ಕುತ್ತಿಗೆಗೆ ತಾಗಿದೆ.
ಗಂಭೀರ ಗಾಯಗೊಂಡು ತೀವ್ರ ರಕ್ತ ಸ್ರಾವವಾಗಿ ಒದ್ದಾಡುತ್ತಿದ್ದ ಪ್ರಶಾಂತ್ನನ್ನು ಕುಟುಂಬಸ್ಥರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಪ್ರಶಾಂತ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪೈಂಟ್ ಮಿಕ್ಸರ್ಗೆ ಕೂದಲು ಸಿಲುಕಿ ಮಹಿಳೆಯ ತಲೆಯೇ ಕಟ್
ಹಿಂದೊಮ್ಮೆ ಬೆಂಗಳೂರಿನಲ್ಲೂ ಪೈಂಟ್ ಮಿಕ್ಸರ್ಗೆ ಕೂದಲು ಸಿಲುಕಿದ ಪರಿಣಾಮ ಮಹಿಳೆಯ ತಲೆಯೇ ಕಟ್ ಆಗಿ ಮೃತಪಟ್ಟಿದ್ದರು. ಯಂತ್ರಗಳು ಇರುವ ಉದ್ಯಮಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಎಷ್ಟೇ ಎಚ್ಚರ ವಹಿಸಿದರೂ ಸಾಕಾಗುವುದಿಲ್ಲ. ಅವರು ಧರಿಸುವ ಬಟ್ಟೆ, ತಲೆ ಕೂದಲು, ವೇಲುಗಳೇ ಅವರಿಗೆ ಅಪಾಯ ತಂದಿಡುವುದುಂಟು. ಬೆಂಗಳೂರಿನ ಒಂದು ಕಾರ್ಖಾನೆಯಲ್ಲಿ ಅಂತಹುದೇ ಘಟನೆ (Accidental death) ನಡೆದಿತ್ತು. ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ಗೆ (Paint Mixer) ಕೂದಲು ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ (Woman Dead) ಮೃತಪಟ್ಟಿದ್ದರು.
ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ (Sri Paints Factory) ನಡೆದ ಘಟನೆಯಲ್ಲಿ ಶ್ವೇತಾ (34) ಎಂಬ ಮಹಿಳೆ ಮೃತಪಟ್ಟಿದ್ದರು. ಪೈಂಟ್ ಮಿಕ್ಸಿಂಗ್ ಕಾರ್ಖಾನೆಯಾಗಿದ್ದು, ಇಲ್ಲಿ ಒಂದು ಗ್ರೈಂಡರ್ನಲ್ಲಿ ಪೌಡರ್ ಮತ್ತು ಇತರ ಸಾಮಗ್ರಿಗಳನ್ನು ಹಾಕಿ ಬಣ್ಣವನ್ನು ತಯಾರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರೈಂಡರ್ಗೆ ಜಡೆ ಸಿಲುಕಿ ಮಹಿಳೆಯ ತಲೆಯೇ ಕತ್ತರಿಸಿ ಹೋಗಿತ್ತು.
ಗ್ರೈಂಡರ್ನ ಒಳಗೆ ಬಣ್ಣ ಗಟ್ಟಿಯಾಗಿತ್ತು. ಅದನ್ನು ಚೆಕ್ ಮಾಡಲೆಂದು ಒಳಗೆ ಬಗ್ಗಿದಾಗ ಒಮ್ಮೆಗೇ ತಲೆಕೂದಲು ಸಿಕ್ಕಿಹಾಕಿಕೊಂಡಿದೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್ ಸದ್ದಿನಿಂದಾಗಿ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಉಳಿದ ಕೆಲಸಗಾರರು ಬಂದು ನೋಡಿದಾಗ ಶ್ವೇತಾ ಸತ್ತುಬಿದ್ದಿದ್ದು ಕಂಡುಬಂತು.
ತಲೆಕೂದಲು ಸಿಕ್ಕಿಕೊಂಡ ಬಳಿಕ ಬ್ಲೇಡ್ಗಳು ಆಕೆಯ ಕೊರಳನ್ನೇ ಕತ್ತರಿಸಿದ್ದವು. ಆಗ ಆಕೆ ಹೊರಕ್ಕೆ ಎಸೆಯಲ್ಪಟ್ಟರು. ಶ್ವೇತಾ ಅವರು ತಮ್ಮ ಗಂಡ ಮತ್ತು ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಈ ಘಟನೆಯಿಂದ ಕಾರ್ಖಾನೆ ಕಾರ್ಮಿಕರಲ್ಲಿ ಸೂತಕದ ಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಇಂಥ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಆತಂಕ ಕೂಡಾ ಕಾಡುತ್ತಿದೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ