Site icon Vistara News

Archaeological Survey: ಆಳುಪ ದೊರೆ 2ನೇ ಬಂಕಿದೇವನ‌ ಶಾಸನ ಅಧ್ಯಯನ

Archaeological Survey

ಮಂಗಳೂರು: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟದ ದಾಮೋದರ ಸಪಲಿಗ‌ ಇವರ ಗದ್ದೆಯಲ್ಲಿರುವ ಶಾಸನವನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ‌ ಇತಿಹಾಸ ಮತ್ತು ಪುರಾತತ್ವ(Archaeological Survey) ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ‌‌‌ ಮೂಡುಬೆಳ್ಳೆ ಮತ್ತು ತೃತೀಯ ಬಿ.ಎ ವಿದ್ಯಾರ್ಥಿಯಾದ ವಿಶಾಲ್ ರೈ.‌ ಕೆ ಅವರು ‌ಅಧ್ಯಯನಕ್ಕೆ(Inscription Study) ಒಳಪಡಿಸಿದ್ದಾರೆ

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಸುಮಾರು 3 ಅಡಿ ಎತ್ತರ, 2 ಅಡಿ ಅಗಲವನ್ನು‌ ಹೊಂದಿದೆ.‌ 13 ನೆಯ ಶತಮಾನದ ಕನ್ನಡ ಲಿಪಿ ‌ಮತ್ತು ಭಾಷೆಯಲ್ಲಿರುವ ಈ ಶಾಸನವು ಒಟ್ಟು 15 ಸಾಲುಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ 12 ಸಾಲು ಮತ್ತು ಶಾಸನದ ಎಡ ಬದಿಯಲ್ಲಿ 3 ಸಾಲುಗಳನ್ನು ನೋಡಬಹುದಾಗಿದೆ.

ಸ್ವಸ್ತಿ ಶ್ರೀಮತು ಎಂದು ಆರಂಭಗೊಳ್ಳುವ ಈ ಶಾಸನವು ಕ್ರೋಧಿ ಸಂವತ್ಸರದ ಸಿಂಹಮಾಸ ಮೊದಲಾಗಿ 5ನೆಯ ಆ ಎಂದಿದ್ದು ಈ ಕಾಲಮಾನವು(Alupa dynasty) ಆಳುಪ ದೊರೆ 2ನೆಯ ಬಂಕಿದೇವನ (ಸಾ.ಶ.ವ. 1258-1315‌) ಆಳ್ವಿಕೆಯ ಕಾಲಕ್ಕೆ ಸರಿ ಹೊಂದುತ್ತದೆ. ಈ ಕಾಲಘಟ್ಟದಲ್ಲಿ ಆಳುಪ ದೊರೆ ಎರಡನೆಯ ಬಂಕಿದೇವನು ಮಂಗಳೂರನ್ನು ಆಳ್ವಿಕೆ ಮಾಡುತ್ತಿದ್ದಾಗ ಬೊಮಣತಿಕಾರಿಯು ಪೊಳಲ (ಪ್ರಸ್ತುತ ಪೊಳಲಿ) ದೇವಾಲ್ಯದಲ್ಲಿ ಕಲ್ವುಟ (ಪ್ರಸ್ತುತ ಕಲ್ಕುಟ) ದ ಭೂಮಿಯಿಂದ ಪೊಳಲ ದೇವರಿಗೆ ಬಿಟ್ಟ ಗೇಣಿಯ ವಿವರವನ್ನು ಶಾಸನವು‌ ಉಲ್ಲೇಖಿಸುತ್ತದೆ. ಶಾಸನವು ಕೊನೆಯಲ್ಲಿ ಶಾಪಾಶಯ ವಾಕ್ಯದೊಂದಿಗೆ‌ ಕೊನೆಗೊಳ್ಳುತ್ತದೆ.

ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ಮುಖ್ಯ ಗುಮಾಸ್ತ ಅರುಣ್ ಕುಮಾರ್, ವಿಜಿತಾ ಅಮೀನ್ ಮತ್ತು ಸ್ಥಳೀಯರಾದ ರೋಹಿತಾಕ್ಷ, ಸೂರಜ್ ಅವರು ಸಹಕಾರ ನೀಡಿದ್ದಾರೆ.

ಇದನ್ನೂ ಓದಿ Shekhar Ajekar : ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ನಿಧನ

ಪೊಳಲಿ: 8-9 ನೇ ಶತಮಾನದ ಅಪೂರ್ವ ನರಸಿಂಹ ವಿಗ್ರಹ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಲ್ಕುಟದ ಭರತ್ ದೋಟ ಇವರ ಜಾಗದಲ್ಲಿರುವ “ಬಾಕುಲಜ್ಜ” ಎಂದು ಸ್ಥಳೀಯರಿಂದ ಕರೆಯಲ್ಪಡುವ ನರಸಿಂಹ ವಿಗ್ರಹವನ್ನು(narasimha statue), ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಇಲ್ಲಿನ ತೃತೀಯ ಬಿ.ಎ ವಿದ್ಯಾರ್ಥಿ ವಿಶಾಲ್ ರೈ ಕೆ ಅವರು ಮರು ಅಧ್ಯಯನಕ್ಕೆ(Archaeological Survey) ಒಳಪಡಿಸಿದ್ದಾರೆ.

ಇದನ್ನೂ ಓದಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 3 ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದ ಎನ್‌ಐಎ

ಈ ವಿಗ್ರಹದ ಪೀಠ ಭಾಗವು ಭೂಮಿಯಲ್ಲಿ‌ ಹುದುಗಿದ್ದು, ಭೂ ಮೇಲ್ಮೈಯಿಂದ ಸುಮಾರು 2.5 ಅಡಿ ಎತ್ತರವಿರುವ ಈ ವಿಗ್ರಹವನ್ನು ಕುಳಿತಿರುವಂತೆ ಕೆತ್ತನೆ ಮಾಡಲಾಗಿದೆ. ಸಿಂಹದ ಮುಖ ಮತ್ತು ಮನುಷ್ಯ ದೇಹ ರಚನೆಯನ್ನು ಹೊಂದಿರುವ ದ್ವಿಭುಜಧಾರಿಯಾಗಿರುವ ಈ ನರಸಿಂಹ ಶಿಲ್ಪವು ತನ್ನ ಎಡಗೈಯನ್ನು ಎಡತೊಡೆಯ ಮೇಲೆ ಹಾಗೂ ತನ್ನ ಬಲಗೈಯಲ್ಲಿ ಬಹುಬೀಜಫಲವನ್ನು ಹಿಡಿದು ಬಲಗಾಲಿನ ಮೊಣಗಂಟಿನ ಮೇಲೆ ಇರಿಸಿ ಕುಳಿತ ಭಂಗಿಯಲ್ಲಿದೆ. ಶಿಲ್ಪದಲ್ಲಿ ಕಂಠಪಟ್ಟಿ, ತೋಳ್ಭಂದಿ, ಕೈಗಡಗದ ವಿನ್ಯಾಸವನ್ನು ಕಾಣಬಹುದಾಗಿದೆ.


ಇದೇ‌ ಮಾದರಿಯ ಇನ್ನೊಂದು‌ ಮೂರ್ತಿಯು ಪೊಳಲಿ ರಾಜರಾಜೇಶ್ವರಿ ದೇವಾಲಯದ ಹತ್ತಿರವಿರುವ ಕೊಟ್ಟಾರಿಪಾಲು ಪ್ರದೇಶದ ನಾರಾಯಣ ಭಟ್ ಇವರ ಜಾಗದಲ್ಲಿದ್ದು, ಇದರ ಕಾಲಮಾನವನ್ನು ಪಾದೂರು‌ ಗುರುರಾಜ ಭಟ್ಟರು ತಮ್ಮ ಸಂಶೋಧನಾ ಗ್ರಂಥವಾದ ‘ಸ್ಟಡೀಸ್ ಇನ್ ತುಳುವ ಹಿಸ್ಟರಿ ಆ್ಯಂಡ್​ ಕಲ್ಚರ್’ ಲ್ಲಿ 8-9 ನೇ ಶತಮಾನವೆಂದು ಹೇಳಿರುತ್ತಾರೆ. ಹಾಗಾಗಿ ಇದೇ ರೀತಿಯ ಹೋಲಿಕೆಯನ್ನು ಹೊಂದಿರುವ ಈ ಶಿಲ್ಪವು ಸಹ ಕಾಲಮಾನದ ದೃಷ್ಟಿಯಿಂದ ಸುಮಾರು 8-9 ನೇ ಶತಮಾನಕ್ಕೆ ಸೇರಿರಬಹುದೆಂದು ಅಂದಾಜಿಸಿಲಾಗಿದೆ.

ಇಂದಿಗೂ ಪೂಜೆ ಸಲ್ಲಿಕೆ

ಸ್ಥಳೀಯರು ತಮ್ಮ ದನ – ಕರುಗಳು ಅಸ್ವಸ್ಥ ಅಥವಾ ಕಾಣೆಯಾದ ಸಂದರ್ಭದಲ್ಲಿ ಈ ಬಾಕುಲಜ್ಜನಿಗೆ (ನರಸಿಂಹ) ಹರಕೆಯನ್ನು ಸಲ್ಲಿಸಿ, ಇಂದಿಗೂ ಪೂಜಿಸಿ ಮತ್ತು ರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ ಎಂದು ಸಂಶೋಧನಾರ್ಥಿಗಳು‌ ತಿಳಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಯಲ್ಲಿ ವಿಜಿತಾ ಅಮೀನ್, ರೋಹಿತಾಕ್ಷ, ಸೂರಜ್ ಪೊಳಲಿ ಮತ್ತು ಕೃಷ್ಣ ಪೊಳಲಿಯವರು ಸಹಕಾರ ನೀಡಿರುತ್ತಾರೆ.

Exit mobile version