ಬೆಂಗಳೂರು: ಬಂಟ ಸಮುದಾಯದಲ್ಲಿರುವ ಒಗ್ಗಟ್ಟು, ಪರೋಪಕಾರ ಮನೋಭಾವ ಸೇರಿ ಅನೇಕ ಗುಣಗಳು ಎಲ್ಲರಿಗೂ ಮಾದರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಶ್ಲಾಘಿಸಿದರು.
ಬೆಂಗಳೂರಿನ ಬಂಟರ ಸಂಘದ ಬಿ.ಎಸ್ ಆರ್.ಎನ್.ಎಸ್. ವಿದ್ಯಾನಿಕೇತನ -2 ಶಾಲೆಯ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಕಟ್ಟಡ ಅದ್ಭುತವಾಗಿದೆ. ಸ್ವಿಜರ್‌ಲೆಂಡ್ ಮಾದರಿಯನ್ನು ನೋಡಿ ಈ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ನಿಜವಾಗಿಯೂ ಇಲ್ಲಿನ ಪರಿಸರದ ಮಕ್ಕಳು ಸ್ವಿಜರ್‌ಲೆಂಡ್‌ನಲ್ಲಿದ್ದೇವೆ ಎನ್ನುವ ಭಾವನೆಯಲ್ಲೆ ಕಲಿಯಲು ಸಹಾಯಕವಾಗಿದೆ. ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಕೂಡ ಇದರಿಂದ ಸಾಧ್ಯ ಎಂದು ಶಾಲೆಯ ವಾತವಾರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು
ಬಂಟರ ಸಂಘದ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಂಟ ಸಮಾಜದಲ್ಲಿರುವ ಒಗ್ಗಟ್ಟು, ಸಂಘಟನಾ ಶಕ್ತಿ, ದಾನ ಹಾಗೂ ಸಮಾಜ ಸೇವೆ ಮತ್ತು ಪರೋಪಕಾರ ಮನೋಭಾವನೆ ಸಮಾಜಕ್ಕೆ ಮಾದರಿಯಾಗಿದೆ. ಬಂಟರ ಸಂಘ ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡುತ್ತದೆ ಎಂದು ಶ್ಲಾಘಿಸಿದರು.
ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ಬಂಟ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲ ಕಡೆಯೂ ಎಲ್ಲ ಸಮಾಜದೊಂದಿಗೆ ಬೆರೆತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಶಾಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಎಸ್ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ಆಡಳಿತ ಚೇರ್ಮನ್ ಕೆ. ಪ್ರಕಾಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ ಸೇರಿ ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.
ಭಾನುವಾರ ಶಾಲೆ ಲೋಕಾರ್ಪಣೆ
ಶಾಲೆಯ ಆಡಳಿತ ಕಚೇರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ನೂತನ ಶಾಲಾ ಕಟ್ಟಡವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಭಾನುವಾರ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಲಿದ್ದಾರೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್ ವೆಬ್‌ಸೈಟ್ ಮತ್ತು ಚಾನೆಲ್ ಲೋಗೊ ಅನಾವರಣ: ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತಿ