ಮಂಗಳೂರು: ಡಿಸೆಂಬರ್ 24ರಂದು ದುಷ್ಕರ್ಮಿಗಳಿಂದ ಕೊಲೆಗೀಡಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜತೆಗಿರುವುದಾಗಿ ಭರವಸೆ ನೀಡಿತು.
ಯಾರ ತಂಟೆತಕರಾರಿಗೂ ಹೋಗದ, ತನ್ನ ಪಾಡಿಗೆ ಬದುಕು ನಡೆಸುತ್ತಿದ್ದ ಜಲೀಲ್ ಹತ್ಯೆ ಕುರುಡು ಕೋಮುದ್ವೇಷದಿಂದ ನಡೆದಿರುವುದು ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ, ಅಭದ್ರತೆ ಮೂಡಿಸಿದೆ. ಸಮಾಜದಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ, ಜಲೀಲ್ ಹತ್ತು ತಿಂಗಳ ಮಗು ಹಾಗೂ ಮಡದಿ ಅನಾಥವಾಗಿದ್ದಾರೆ. ಈ ಸಂದರ್ಭದಲ್ಲಿ ಕೊಲೆಯನ್ನು ಬಲವಾಗಿ ಖಂಡಿಸುವುದು, ಸಂತ್ರಸ್ತ ಕುಟುಂಬದ ಜತೆ ನಿಲ್ಲುವುದು, ಆತಂಕಕ್ಕೊಳಗಾಗಿರುವ ಸಮುದಾಯದ ನ್ಯಾಯದ ಬೇಡಿಕೆಗೆ ಧ್ವನಿಗೂಡಿಸುವುದು ನಾಗರಿಕ ಸಮಾಜದ ಜವಾಬ್ದಾರಿ. ಆ ಉದ್ದೇಶದ ಭಾಗವಾಗಿ ವಿವಿಧ ಸಮುದಾಯಗಳಿಗೆ ಸೇರಿದ ಮಂಗಳೂರಿನ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಕೊಲೆಗೀಡಾದ ಜಲೀಲ್ ಮನೆಗೆ ಭೇಟಿ ನೀಡಿದ್ದೇವೆ ಎಂದು ಪ್ರತಿನಿಧಿಗಳ ನಿಯೋಗ ತಿಳಿಸಿದೆ.
ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ನಿಷ್ಪಕ್ಷಪಾತ ತನಿಖೆ ನಡೆಯಬೇಕು, ಕೊಲೆಗೆ ಪ್ರಚೋದನೆ ನೀಡಿದವರನ್ನು ಬಯಲಿಗೆ ತರಬೇಕು, ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಿಯೋಗ ಆಗ್ರಹಿಸಿತು. ವಿನಾಕಾರಣ ಕೊಲೆಗೀಡಾದ ಜಲೀಲ್‌ರ ಸಂತ್ರಸ್ತ ಕುಟುಂಬವನ್ನು ಶಾಸಕ ಭರತ್ ಶೆಟ್ಟಿ ಸೌಜನ್ಯಕ್ಕೂ ಭೇಟಿಯಾಗದಿರುವುದನ್ನು ನಾಗರಿಕರ ನಿಯೋಗ ಖಂಡಿಸಿತು. ಜತೆಗೆ ಶಾಸಕರು ತಕ್ಷಣ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಧೈರ್ಯ ತುಂಬಬೇಕು, ಪರಿಹಾರ ಕೊಡಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿತು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ದಲಿತ ನಾಯಕರಾದ ಎಂ ದೇವದಾಸ್, ರಘು ಎಕ್ಕಾರು, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ | Mahima Swamy | ಬೆಂಗಳೂರಿನ ವಿಜ್ಞಾನಿ ಮಹಿಮಾ ಸ್ವಾಮಿಗೆ ಯುರೋಪಿನ ಉನ್ನತ ಪ್ರಶಸ್ತಿ