ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ(Independence Day) ಅಂಗವಾಗಿ ಬಂಟ್ವಾಳ ತಾಲೂಕಿನ ಕರಿಯಂಗಳ, ಕುಕ್ಕಿಪ್ಪಾಡಿ, ಕಡೇಶ್ವಾಲ್ಯ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರದ ಬಳಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರಿಯಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕುಟ ಕೊಳದ ಬಳಿ ಅಮೃತ ಸರೋವರದ ಬಳಿ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ಅನೀಶ್ ಎ.ಎಲ್. ಅವರು ನೆರವೇರಿಸಿದರು. ಸಾಧಕರಿಗೆ ಸನ್ಮಾನ, ಅಭಿನಂದನೆ ಹಾಗೂ ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶಾಸಕರಾದ ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇಶಕ ದಿನೇಶ್ ಎಂ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ ಸಾಲಿಯಾನ್, ಗ್ರಾಪಂ ಪಿಡಿಒ ಮಾಲಿನಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಪಂ ಸಂಜೀವಿನಿ ಒಕ್ಕೂಟದ ವಾರದ ಸಂತೆ ನಡೆಯಿತು. ಇದಕ್ಕೂ ಮುನ್ನ ವಿವಿಧ ಶಾಲೆಗಳ 300ಕ್ಕೂ ಹೆಚ್ಚು ಮಕ್ಕಳಿಂದ ಜಾಥಾ ನಡೆಯಿತು. ಕರಿಯಂಗಳ ಗ್ರಾಪಂ ವ್ಯಾಪ್ತಿಯ ಕಲ್ಕುಟ ಕೊಳದ ಬಳಿ ಅಮೃತ ಸರೋವರದ ಸಂಪೂರ್ಣ ಅಭಿವೃದ್ಧಿ ರೂಪುರೇಷೆ ಬಿಂಬಿಸುವ ಫ್ಲೆಕ್ಸ್ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು
ಅದೇ ರೀತಿ ಕುಕ್ಕಿಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ಯಾರು ಅಮೃತ ಸರೋವರದ ಬಳಿ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ದಯಾನಂದ ಶೆಟ್ಟಿ ಅವರು ನೆರವೇರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ಗ್ರಾಪಂ ಅಧ್ಯಕ್ಷರಾದ ಸುಜಾತಾ, ಉಪಾಧ್ಯಕ್ಷರಾದ ಯೋಗೀಶ್ ಆಚಾರ್ಯ, ಗ್ರಾಪಂ ಸದಸ್ಯರು, ಗ್ರಾಪಂ ಪಿಡಿಒ ತುಳಸಿ, ಗ್ರಾಮಸ್ಥರು ಹಾಜರಿದ್ದರು.
ಹಾಗೇಯೇ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಪಂ ಪಂಚಾಯತ್ ವ್ಯಾಪ್ತಿಯ ಕಲ್ಲಾಜೆ ಅಮೃತ ಸರೋವರದ ಬಳಿ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ವಿದ್ಯಾಧರ್ ಪೂಜಾರಿ ಅವರು ನೆರವೇರಿಸಿದರು. ಗ್ರಾಪಂ ಅಧ್ಯಕ್ಷರಾದ ಸುರೇಶ ಶೆಟ್ಟಿಗಾರ್, ಉಪಾಧ್ಯಕ್ಷರಾದ ಜಯ, ಗ್ರಾಪಂ ಸದಸ್ಯರು, ಗ್ರಾಪಂ ಪಿಡಿಒ ಸುನೀಲ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಬಳಿಕ 250ಕ್ಕೂ ಹೆಚ್ಚು ಮಕ್ಕಳಿಂದ ಜಾಥಾ ನಡೆಯಿತು.