ರಾಜೇಶ್ ಪುತ್ತೂರು, ಮಂಗಳೂರು
ಚುನಾವಣೆ ಸಮೀಪಿಸುತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸದ್ಯ ಬಿಜೆಪಿ ಪ್ರಾಬಲ್ಯ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಾಕಷ್ಟು ಸರ್ಕಸ್ ಮಾಡುತ್ತಿದೆ.
ಸದ್ಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳು ಬಿಜೆಪಿ ಕೈಯಲ್ಲಿದ್ದರೂ ಮುಂದಿನ ಚುನಾವಣೆ ಬಿಜೆಪಿಗೆ ಅಷ್ಟೊಂದು ಸಲೀಸಾಗಿಲ್ಲ. ಮಂಗಳೂರು ಉತ್ತರ, ಪುತ್ತೂರು ಹಾಗೂ ಬೆಳ್ತಂಗಡಿ ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಲು ಸಿದ್ಧವಾಗಿದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಾಕಷ್ಟು ತಿರುವುಗಳು ಕಾಣಲು ಆರಂಭವಾಗಿವೆ.
ಮಂಗಳೂರು ಉತ್ತರ: ಪ್ರತಿಭಾ ಕುಳಾಯಿಗೆ ಅದೃಷ್ಟ?
2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರಾದರೂ ನೇರ ಫೈಟ್ ಇರುವುದು ಮೂವರ ನಡುವೆ ಮಾತ್ರ. ಮಾಜಿ ಶಾಸಕ ಮೊಯ್ದಿನ್ ಬಾವ ಹಾಗೂ ಇನಾಯತ್ ಅಲಿ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ದರೆ, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕೂಡಾ ಈ ಇಬ್ಬರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಈ ಇಬ್ಬರು ಆಕಾಂಕ್ಷಿಗಳ ನಡುವೆ ಇರುವ ಭಿನ್ನಾಪ್ರಾಯವನ್ನು ಎನ್‌ಕ್ಯಾಶ್ ಮಾಡಿಕೊಂಡು ಟಿಕೆಟ್ ದಕ್ಕಿಸಿಕೊಳ್ಳಲು ಪ್ರತಿಭಾ ಕುಳಾಯಿ ಪ್ರಯತ್ನ ನಡೆಸಿದ್ದಾರೆ.
ಪ್ರತಿಭಾ ಕುಳಾಯಿ ಮಾಜಿ ಕಾರ್ಪೋರೇಟರ್ ಆಗಿದ್ದು, ಸಮಾಜ ಸೇವೆಯ ಮೂಲಕ ಸಾಕಷ್ಟು ಜನರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರ ಜತೆಗೂ ಒಳ್ಳೆಯ ಒಡನಾಟ ಇಟ್ಟುಕೊಂಡು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಲಾಭವೂ ತಮಗೆ ಪ್ಲಸ್ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದರೆ ಪ್ರತಿಭಾ ಅವರಿಗೆ ಮಂಗಳೂರು ಉತ್ತರದಲ್ಲಿ ಟಿಕೆಟ್ ಗ್ಯಾರಂಟಿ ಎನ್ನುವ ನಿರೀಕ್ಷೆ ಇದೆ. ಇನ್ನು ಇನಾಯತ್ ಅಲಿಗೆ ಟಿಕೆಟ್ ನೀಡಿದರೆ ಮೊಯ್ದಿನ್ ಬಾವ ಬಂಡಾಯದ ಬಾವುಟ ಹಾರಿಸುವುದು ಖಚಿತವಾಗಿದೆ. ಸದ್ಯ ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆ ಹೊಂದಿರುವ ಕಾಂಗ್ರೆಸ್ ಪಕ್ಷ ಬಂಡಾಯದ ಕಾರಣ ಸೋಲಿಗೆ ಶರಣಾಗದೆ ಪ್ರತಿಭಾ ಅವರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕವಾಗಿ ಕ್ಷೇತ್ರದ ಕಾಂಗ್ರೆಸ್ ನಾಯಕರೂ ಪ್ರತಿಭಾ ಪರ ಹೈಕಮಾಂಡ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಬೆಳ್ತಂಗಡಿ: ಬಿ.ಕೆ. ಹರಿಪ್ರಸಾದ್ ಸಂಬಂಧಿಗೆ ಟಿಕೆಟ್!
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಹರೀಶ್ ಪೂಂಜಾ ಗೆಲ್ಲುವ ಫೇವರಿಟ್ ಆಗಿದ್ದಾರೆ. ಆದರೆ ಕಾಂಗ್ರೆಸ್‌ನ ಯುವ ನಾಯಕ ರಕ್ಷಿತ್ ಶಿವರಾಂ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಂಚರಿಸಿ ಯುವಕರನ್ನು ಸಂಘಟಿಸುವ ಮೂಲಕ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಈ ಬಾರಿ ಬೆಳ್ತಂಗಡಿಯಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಜಿ ಶಾಸಕರಾದ ವಸಂತ ಬಂಗೇರ, ಮಾಜಿ ಶಾಸಕ ಗಂಗಾಧರ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಸಂಬಂಧಿ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳೀಯರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಬಾರದು ಎಂಬ ಕಾರಣದಿಂದ ಇಲ್ಲಿಯೂ ಬಂಡಾಯದ ತಂತ್ರ ಅನುಸರಿಸಲು ಎಲ್ಲಾ ಸಿದ್ಧತೆ ನಡೆದಿತ್ತಾರಾದರೂ, ಹೈಕಮಾಂಡ್ ಸೂಚನೆಯನ್ನು ಪಾಲಿಸಿ ಎನ್ನುವ ಸಂದೇಶ ಬೆಂಗಳೂನಿಂದ ಬಂದಿದೆ. ಯಾರಿಗೆ ಟಿಕೆಟ್ ನೀಡುತ್ತೇವೆಯೋ ಅವರಿಗೆ ಬೆಂಬಲ ನೀಡಿ ಗೆಲ್ಲಿಸುವ ಪ್ರಯತ್ನ ಮಾಡಿ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ ಎಲ್ಲಾ ಆಕಾಂಕ್ಷಿಗಳು ಸದ್ಯ ಮೌನಕ್ಕೆ ಶರಣಾಗಿದ್ದು, ಯುವ ನಾಯಕ ರಕ್ಷಿತ್ ಶಿವರಾಂ ಟಿಕೆಟ್ ಪಡೆಯುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ ಎಲೆಕ್ಷನ್ ಹವಾ | ಮಂಗಳೂರು ದಕ್ಷಿಣ | ʼವೇದವ್ಯಾಸʼ ವಿರುದ್ಧ ಸೆಣೆಸಲು ಕಾಂಗ್ರೆಸ್‌ನಲ್ಲಿ ಲೋಬೊ ಮತ್ತಿತರರ ಪೈಪೋಟಿ
ಪುತ್ತೂರು: ಡಿ.ವಿ.ಸದಾನಂದ ಗೌಡ ಆಪ್ತನಿಗೆ ಕಾಂಗ್ರೆಸ್ ಟಿಕೆಟ್!
ಪುತ್ತೂರು ವಿಧಾನಸಭಾ ಕ್ಷೇತ್ರದ ಕಥೆ ಹೀಗೆಯೇ ಆಗಿದ್ದು, ಅಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಪ್ರಯತ್ನ ನಡೆಸಿದೆ. ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಉದ್ಯಮಿ ಅಶೋಕ್ ರೈ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಆಪ್ತ ಹಾಗೂ ಬಿಜೆಪಿಯ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದ ಅಶೋಕ್ ರೈಗೆ ಟಿಕೆಟ್ ನೀಡುವುದಕ್ಕೆ ಪುತ್ತೂರು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಬಂದ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿತ್ತು, ಇದೀಗ ಮತ್ತೆ ಬಿಜೆಪಿಯ ನಂಟಿರುವ ಅಶೋಕ್ ರೈಗೆ ಟಿಕೆಟ್ ನೀಡದೆ ನೈಜ ಕಾಂಗ್ರೆಸಿಗರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ಇದೇ ಆಕ್ರೋಶದಲ್ಲಿ ಪಕ್ಷದ ನಾಯಕರನ್ನು ಟೀಕಿಸಿದ್ದ ಕಾರಣಕ್ಕೆ ಈಗಾಗಲೆ ಕಾಂಗ್ರೆಸ್ ಮುಖಂಡ ಹಾಗೂ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಯಿಂದ ವಜಾಗೊಳಿಸಲಾಗಿದೆ.
ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಹೆಚ್ಚಿನ ಸ್ಥಾನ ಗಳಿಸಲು ಸರ್ಕಸ್ ಮಾಡುತ್ತಿದೆ. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡುವ ಜತೆಗೆ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಕ್ಕೂ ಅವಕಾಶ ನೀಡದ ರೀತಿಯಲ್ಲಿ ತಂತ್ರಗಾರಿಕೆ ನಡೆಸುತ್ತಿದೆ. ಎಂಟರಲ್ಲಿ ಕನಿಷ್ಠ 5 ಕ್ಷೇತ್ರ ಗೆಲ್ಲಲೇಬೇಕು ಎನ್ನುವ ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆಯ ಬಳಿಕ ಆಗುವ ಬಂಡಾಯವನ್ನು ಈಗಲೇ ಮಟ್ಟ ಹಾಕಲು ಪ್ರಯತ್ನ ನಡೆಸಿದೆ.
ಇದನ್ನೂ ಓದಿ | ಎಲೆಕ್ಷನ್ ಹವಾ | ಮಂಗಳೂರು ಉತ್ತರ | ಕೈಗಾರಿಕೆಗಳ ಕ್ಷೇತ್ರದಲ್ಲಿ ಹಿಂದುತ್ವವೇ ಟ್ರಂಪ್ ಕಾರ್ಡ್ ಆಗುವ ಮುನ್ಸೂಚನೆ