ಬೆಳ್ತಂಗಡಿ: ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಪಡಂಗಡಿ ಪೊಯ್ಯೇಗುಡ್ಡೆ ನಿವಾಸಿ ಪ್ರಸ್ತುತ ವಿವಾಹವಾಗಿ ಒಂದು ವರ್ಷದಿಂದ ಚಿಕ್ಕಮಗಳೂರಿನಲ್ಲಿ ಪತಿಯ ಮನೆಯಲ್ಲಿದ್ದರು. ಎದೆ ನೋವು ಕಾಣಿಸಿಕೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಬುಧವಾರ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ. ಅವರು ತಂದೆ, ತಾಯಿ ಮತ್ತು ಪತಿಯನ್ನು ಅಗಲಿದ್ದಾರೆ.
ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9 ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ್ದರು. ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿಯನ್ನು ಪಡೆದ ಅವರು ಮುಂದೆ ಪ್ರೌಢ ಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆಯುತ್ತಿದ್ದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿದ್ದರು. ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆಯುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು.
ಇದನ್ನೂ ಓದಿ Mangalore Airport: ಒಳ ಉಡುಪಿನಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಸಾಗಣೆ; ಪ್ರಯಾಣಿಕ ಸೆರೆ
ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿಯೂ ಜನಮನ್ನಣೆಗಳಿಸಿದ್ದರು. ಅವರ ಸಾಧನೆಯ ಹಿಂದೆ ತರಬೇತುದಾರರಾದ ಉಜಿರೆ ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರ ಶ್ರಮ ಅಪಾರವಿದೆ.
ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಸಾಧನೆಯ ಹಾದಿಯಾಗಿದೆ. ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಂಸಿ ಗೌರವಿಸಿದ್ದರು.