ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಾಗ್ವಾದ ಮುಗಿಯುವ ಹಾಗೇ ಕಾಣುತ್ತಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನದಿಂದ ರೋಹಿತ್ ಚಕ್ರತೀರ್ಥರನ್ನು ಇಳಿಸಿದ್ದರೂ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ. ಮಂಗಳೂರಿನಲ್ಲಿ ಬಲಪಂಥೀಯ ಸಂಘಟನೆಗಳಿಂದ ಶನಿವಾರ ರೋಹಿತ್ ಚಕ್ರತೀರ್ಥರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | ಪಠ್ಯಪುಸ್ತಕ ವಿಚಾರದಲ್ಲಿ ಆತ್ಮರಕ್ಷಣೆಗೆ ʼಒಕ್ಕಲಿಗʼ ಕಾರ್ಡ್ ಬಳಸಿದ ಬೊಮ್ಮಾಯಿ
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸುಬ್ರಮಣ್ಯ ಯಡಪಡಿತ್ತಾಯರ ಅಧ್ಯಕ್ಷತೆಯಲ್ಲಿ, ಚಿಂತನಗಂಗಾ ಎಂಬ ವೇದಿಕೆಯಿಂದ ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿರುವ ಭುವನೇಂದ್ರ ಹಾಲ್‌ನಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜನೆಯಾಗಿದೆ. ಹಲವು ಸಂಘಟನೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಪ್ರತಿಭಟನೆಗೆ ಸಿದ್ದರಾಗುವಂತೆ ಜಾಲತಾಣದಲ್ಲಿ ಕರೆ ಕೊಡಲಾಗುತ್ತಿದೆ.
ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆಯಲ್ಲಿ ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟಿದ್ದು, ಅನೇಕ ಸಾಹಿತಿಗಳನ್ನು ಅವಮಾನ ಮಾಡಿದ್ದಾರೆ. ಜತೆಗೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೆಬ್ ಅಂಬೇಡ್ಕರ್‌ರಿಗೂ ಅವಮಾನ ಮಾಡಿರುವ ಚಕ್ರತೀರ್ಥರಿಗೆ ಜಿಲ್ಲೆಯಲ್ಲಿ ಸನ್ಮಾನ ಮಾಡಿದರೆ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಜಿಲ್ಲೆಗೆ ಅವಮಾನ ಮಾಡಿದಂತೆ ಎಂದು ಕಾಮೆಂಟ್ ಮಾಡಲಾಗುತ್ತಿದೆ.
ವಿವಿ ಕುಲಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಂತೆ ಒತ್ತಾಯವೂ ಕೇಳಿ ಬಂದಿದ್ದು, ಆಯೋಜಕರು ಕಾರ್ಯಕ್ರಮ ರದ್ದು ಮಾಡಬೇಕು. ಇಲ್ಲವಾದರೆ ಪ್ರತಿಭಟಿಸಲು ಸಿದ್ದತೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಸರ್ಕಾರಕ್ಕೆ ಸತ್ಯ ಬೇಕಿಲ್ಲ, ಓಟು ಬೇಕು: ರೋಹಿತ್ ಚಕ್ರತೀರ್ಥ ವಿದಾಯದ ಮಾತು