ಮಂಗಳೂರು: ಎಸ್‌ಇಝಡ್ ಪ್ರದೇಶದ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯಿಸಿ ರುಚಿಗೋಲ್ಡ್ ಕಂಪನಿ ಮುಂಭಾಗದಲ್ಲಿ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕೂಳೂರು ಎಸ್ಇಝಡ್ ರಸ್ತೆ ಈಗ ಎಮ್ಆರ್‌ಪಿಎಲ್ ಅಧೀನದಲ್ಲಿ ಇದೆ. ಎಸ್ಇಝಡ್, ಅನಘ, ರುಚಿ ಗೋಲ್ಡ್, ಅದಾನಿ ವಿಲ್ಮಾ ಸಹಿತ ಹಲವು ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿವೆ. ಆದರೆ, ಗುಂಡಿಮಯವಾಗಿರುವ ರಸ್ತೆಗಳನ್ನು ಕಂಪನಿಗಳಾಗಲಿ, ಜಿಲ್ಲಾಡಳಿತವಾಗಲಿ ದುರಸ್ತಿ ಮಾಡಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಈ ಮಾರ್ಗದಲ್ಲಿ ಬೃಹತ್ ವಾಹನಗಳು ಸಂಚರಿಸುವುದರಿಂದ ರಸ್ತೆ ಹಾಳಾಗಿದೆ. ಕಂಪನಿಗಳ ಮಲಿನ ನೀರು ರಸ್ತೆಯಲ್ಲಿ ನಿಂತು ರೋಗರುಜಿನಗಳು ವ್ಯಾಪಕವಾಗಿ ಹರಡುತ್ತಿದೆ. ಸಣ್ಣ ವಾಹನಗಳಲ್ಲಿ ಪ್ರಯಾಣಿಸುವ ಜನತೆ ರಸ್ತೆ ಹೊಂಡಕ್ಕೆ ಬಿದ್ದು ಕೈಕಾಲು ಮುರಿಸಿಕೊಳ್ಳುತ್ತಿದ್ದಾರೆ. ಹೊಂಡ ಗುಂಡಿ ಮುಚ್ಚಲು ಜಿಲ್ಲಾಡಳಿತ ತಕ್ಷಣ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರಸ್ತೆ ದುರಸ್ತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಇಲ್ಲಿನ ಕೈಗಾರಿಕೆಗಳನ್ನು ಗಡಿಪಾರು ಮಾಡುವಂತೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.