Site icon Vistara News

PFI RAID | ಡಬಲ್ ಎಂಜಿನ್ ಸರ್ಕಾರದಿಂದ ಎನ್‌ಐಎ ದುರ್ಬಳಕೆ: ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್

ಎಸ್‌ಡಿಪಿಐ

ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಫಿ ಬೆಳ್ಳಾರೆ, ಕಾರ್ಯಕರ್ತರಾದ ಇಕ್ಬಾಲ್ ಬೆಳ್ಳಾರೆ ಸೇರಿ ಹಲವರನ್ನು ವಿಚಾರಣೆ ಹೆಸರಿನಲ್ಲಿ ಬಂಧಿಸಿರುವುದು ಸರಿಯಲ್ಲ. ಬಿಜೆಪಿ ಸರ್ಕಾರ ಎನ್‌ಐಎ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಚಾರಣೆ, ತನಿಖೆಗಾಗಿ ಕರೆದೊಯ್ದವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತ ಎಂದು ಕೊಲೆ ಪ್ರಕರಣವನ್ನು ಡಬಲ್ ಎಂಜಿನ್ ಸರ್ಕಾರ ಎನ್‌ಐಎಗೆ ಕೊಟ್ಟಿದೆ. ಆದರೆ ನಮ್ಮ ಕಾರ್ಯಕರ್ತರು ಸತ್ತಾಗ ಯಾರೂ ಆ ಬಗ್ಗೆ ಮಾತನಾಡಲ್ಲ, ತನಿಖೆಯನ್ನು ಎನ್‌ಐಎಗೆ ವಹಿಸುವುದೂ ಇಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ | Chandru Death | ಈಗಲೇ ಮರ್ಡರ್‌ ಕೇಸ್‌ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಗೃಹಸಚಿವ ಆರಗ ಜ್ಞಾನೇಂದ್ರ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಮಸೂದ್ ಹಾಗೂ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಸಂಚು ರೂಪಿಸಿದವರು ಯಾರು ಎಂದು ಬಿಜೆಪಿ ಸರ್ಕಾರ ಇನ್ನೂ ತಿಳಿಸಿಲ್ಲ. ಈ ಸರ್ಕಾರ ರಣಹೇಡಿ ನೀತಿ‌ ಅನುಸರಿಸುತ್ತಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಸರ್ವಾಧಿಕಾರಿ ರೀತಿಯಾಗಿ ವರ್ತಿಸುತ್ತಿದೆ. ಯಾರು ಸರ್ಕಾರದ ವಿರುದ್ಧ ಮಾತನಾಡುತ್ತಾರೋ ಅವರ ವಿರುದ್ಧ ತನಿಖೆ ಅಸ್ತ್ರ ಬಳಸಿ ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದರು.

ಯಾವುದೇ ತನಿಖಾ ಸಂಸ್ಥೆಗಳು ಕಿರುಕುಳ ಕೊಡಬಾರದು. ತನಿಖಾ ಸಂಸ್ಥೆಗಳು ಸತ್ಯ ಹಾಗೂ ಜನರ ಪರವಾಗಿ ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರು ಬೆಳ್ಳಾರೆಯವರು ಎನ್ನುವ ಕಾರಣಕ್ಕೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಇದನ್ನೂ ವಿರೋಧಿಸಿ ರಾಜ್ಯಾದ್ಯಂತ ಪತ್ರ ಚಳವಳಿ ಮಾಡಿ ರಾಷ್ಟ್ರಪತಿಗಳ ಗಮನಕ್ಕೆ ತರಲಿದ್ದೇವೆ. ಇದು ಎಸ್‌ಡಿಪಿಐ ಮೇಲೆ ಆಗುತ್ತಿರುವ ದೌರ್ಜನ್ಯ ಎಂದು ನೀವು ಅಂದುಕೊಂಡಿರಬಹುದು. ಆದರೆ, ಇದು ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯ ಆಪಾದಿಸಿದರು.

ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ಬೆಳ್ಳಾರೆಯ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಮತ್ತು ಸ್ಥಳೀಯ ಮುಖಂಡರನ್ನು ಬಂಧನ ಮಾಡಲಾಗಿದೆ. ಇದರ ಬಗ್ಗೆ ದಲಿತ ಸಂಘಟನೆ ಹಾಗೂ ಇನ್ನಿತರ ಸಂಘಟನೆಗಳು ಮಾತನಾಡಬೇಕು. ಕಾನೂನು ಹೇಗೆ ಬಳಸಬೇಕು, ಪಾಲನೆ ಮಾಡಬೇಕು ಎಂಬುವುದು ನಮಗೂ ಗೊತ್ತಿದೆ. ಅಧಿಕಾರ ಶಾಶ್ವತ ಅಲ್ಲ, ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ಕಿತ್ತೊಗೆಯುತ್ತಾರೆ. ಎಸ್‌ಡಿಪಿಐ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸರ್ಕಾರದ ಒಂದು ಭಾಗವಾಗುತ್ತದೆ ಎಂದು ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ | Sarvodaya Samavesha | ಸಣ್ಣಪುಟ್ಟ ಭಿನ್ನಮತ ಇದ್ದರೂ ಕಾಂಗ್ರೆಸ್‌ ಅಧಿಕಾರಕ್ಕೆ ತರುತ್ತೇವೆ: ಖರ್ಗೆಗೆ ಸಿದ್ದು ಮಾತು

Exit mobile version