Site icon Vistara News

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮ್ಯಾನೇಜರ್ ಮಂಗಳೂರಿನ ಯುವತಿ

ಬೆಂಗಳೂರು: ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​(India vs Australia Final) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತವನ್ನು 6 ವಿಕಟ್​ಗಳಿಂದ ಮಣಿಸಿ 6ನೇ ಬಾರಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿತ್ತು. ಆಸ್ಟ್ರೇಲಿಯಾದ ಈ ಸಾಧನೆಯ ಹಿಂದೆ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೊ(Urmila Rosario) ಅವರ ಕೊಡುಗೆಯೂ ಇದೆ.

ಹೌದು, 34 ವರ್ಷದ ಊರ್ಮಿಳಾ ರೊಸಾರಿಯೊ ಅವರು ಆಸ್ಟೇಲಿಯಾ ಕ್ರಿಕೆಟ್​ ತಂಡದ ಮ್ಯಾನೇಜರ್(Australian cricket team manager) ಆಗಿದ್ದಾರೆ. ಇವರು ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಸದ್ಯ ಇವರ ತಂದೆ ಮತ್ತು ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು ಸಕಲೇಶಪುರದಲ್ಲಿ ನೆಲೆಸಿದ್ದಾರೆ. ಊರ್ಮಿಳಾ ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀ ಪಡೆದಿದ್ದಾರೆ.


ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಅವರು ಕತಾರ್ ಟೆನಿಸ್ ಫೆಡರೇಶನ್‌ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿ ಆರಂಭಿಕ ದಿನಗಳಲ್ಲಿ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.


ಅಡಿಲೇಡ್ ಕ್ರಿಕೆಟ್​ ತಂಡವನ್ನು ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿದ ಅವರ ಕಾರ್ಯ ತಂತ್ರವನ್ನು ಮನಗಂಡ ಕ್ರಿಕೆಟ್​ ಆಸ್ಟ್ರೇಲಿಯಾ ಅವರಿಗೆ ಮಹಿಳಾ ತಂಡದ ಮ್ಯಾನೇಜರ್ ಹುದ್ದೆಯನ್ನು ನೀಡಿತ್ತು. ಇಲ್ಲಿಯೂ ಅವರು ಯಶಸ್ವಿಯಾದರು. ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ, ಅವರು ಕ್ರಿಕೆಟ್‌ನಿಂದ ರಜೆ ಪಡೆದು ನಾಲ್ಕು ತಿಂಗಳ ಕಾಲ ಕತಾರ್‌ನಲ್ಲಿ ಫುಟ್‌ಬಾಲ್ ಕಾರ್ಯದಲ್ಲಿ ತೊಡಗಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ಅವರನ್ನು ವಿಶ್ವಕಪ್​ ಸಲುವಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ಮ್ಯಾನೇಜರ್​ ಆಗಿ ನೇಮಿಸಲಾಗಿತ್ತು.


ಊರ್ಮಿಳಾ ಅವರ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ಉರ್ಮಿಳಾ ರೊಸಾರಿಯೊ ಅವರು ಜಾಗತಿಕವಾಗಿ ಅತ್ಯಂತ ಯಶಸ್ವಿ ಮಹಿಳಾ ಕ್ರಿಕೆಟ್ ತಂಡವನ್ನು ನಿರ್ವಹಿಸುವ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಆಟಗಾರರು ಊರ್ಮಿಳಾ ಅವರೊಂದಿಗೆ ಟ್ರೋಫಿ ಜತೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊಗಳು ಎಲ್ಲಡೆ ವೈರಲ್​ ಆಗಿದೆ.

ಇದನ್ನೂ ಓದಿ Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ


ಪಂದ್ಯ ಸೋತ ಭಾರತ

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಟ್ರಾವಿಸ್​ ಹೆಡ್​​ ಅವರು ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ ICC World Cup 2023: ವಿಶ್ವ ದಾಖಲೆ ಬರೆದ ವಿಶ್ವಕಪ್​!

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

Exit mobile version