ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.
ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.
ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್ ರೇವಣ್ಣಗೆ ಲುಕೌಟ್ ನೋಟಿಸ್ ಜಾರಿ, ಬಂದ ಕೂಡಲೇ ಬಂಧನ!
ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ
ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.
ಇದನ್ನೂ ಓದಿ:Raja Marga Column : ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್ ಪಾಸ್ ಮಾಡಿದ್ದರು!
ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್ ಪ್ರಸಾದ್ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ