ಚಿಕ್ಕಮಗಳೂರು: ಗೊಲ್ಲರಹಟ್ಟಿ ಪ್ರವೇಶಿಸಿದ ದಲಿತ ಯುವಕನಿಗೆ ಥಳಿತ ಪ್ರಕರಣಕ್ಕೆ ಆಕ್ರೋಶ ಹೊರಹಾಕಿರುವ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ತಾಲೂಕು ಆಡಳಿತ ನೇತೃತ್ವದಲ್ಲಿ ಮಂಗಳವಾರ, ಜಿಲ್ಲೆಯ (Chikkamagaluru News) ತರೀಕೆರೆ ತಾಲೂಕಿನ ಗೇರು ಮರಡಿ ಗೊಲ್ಲರಹಟ್ಟಿಯಲ್ಲಿ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಒಳಗೆ ಪ್ರವೇಶಿಸಿದರು.
ಗೊಲ್ಲರಹಟ್ಟಿ ಗ್ರಾಮಸ್ಥರ ವಿರೋಧದ ನಡುವೆಯೂ ತಹಸೀಲ್ದಾರ್ ರಾಜೀವ್ ನೇತೃತ್ವದಲ್ಲಿ ನೂರಾರು ದಲಿತರು, ರಂಗನಾಥ ಸ್ವಾಮಿ ದೇವಾಲಯ ಪ್ರವೇಶಿಸಿದರು. ನಂತರ ಹಲ್ಲೆಗೊಳಗಾಗಿದ್ದ ಯುವಕ ಸೇರಿ ದಲಿತ ಯುವಕರು ಗರ್ಭಗುಡಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ದೇವರಿಗೆ ಮೈಲಿಗೆ ಆಗಿದೆ ಎಂದು ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಆದರೆ, ಅದೇ ಯುವಕ ಈಗ ದೇವರಿಗೆ ಪೂಜೆ ಮಾಡಿದ್ದಾನೆ. ಗ್ರಾಮಸ್ಥರು ಬೀಗದ ಕೈ ನೀಡದ ಹಿನ್ನೆಲೆಯಲ್ಲಿ ದ್ವಾರ ಬಾಗಿಲು, ಗರ್ಭಗುಡಿ ಬೀಗ ಒಡೆದು ದಲಿತ ಮುಖಂಡರು ದೇವರ ದರ್ಶನ ಪಡೆದರು. ಪೂಜೆ ಬಳಿಕ ಗರ್ಭಗುಡಿ, ದ್ವಾರಬಾಗಿಲನ್ನು ಅಧಿಕಾರಿಗಳು ಮುಚ್ಚಿಸಿದರು. ಇದೇ ವೇಳೆ ಅಸ್ಪೃಶ್ಯತೆ (untouchability) ಆಚರಣೆ ಶಿಕ್ಷಾರ್ಹ ಅಪರಾಧ, ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಗ್ರಾಮಸ್ಥರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Shivamogga News: ಗಿಳಿ ಬಳಸಿ ಜ್ಯೋತಿಷ್ಯ ಹೇಳುತಿದ್ದ ಇಬ್ಬರ ಬಂಧನ!
ಗ್ರಾಮದ ಎಲ್ಲಾ ಮನೆಗಳ ಬಾಗಿಲು ಬಂದ್
ದೇಗುಲ ಪ್ರವೇಶಿಸಲು ದಲಿತರು ಗೊಲ್ಲರಹಟ್ಟಿಗೆ ಆಗಮಿಸಿದ್ದರಿಂದ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಗ್ರಾಮಕ್ಕೆ ದಲಿತರು ಆಗಮನದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದರು. ಇದರಿಂದ ಗ್ರಾಮದ ಎಲ್ಲಾ ಮನೆಗಳ ಬಾಗಿಲುಗಳು ಬಂದ್ ಆಗಿದ್ದವು.
ಪೂಜೆ ಮಾಡಿದ್ದು ಸಂತೋಷ ತಂದಿದೆ
ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ಮಾತನಾಡಿ, ತಿಂಗಳ ಪೂಜೆ ಇದೆ, ಮೈಲಿಗೆ ಆಯ್ತು ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದರು. ನನಗೆ ಹೊಡೆದವರಿಗೂ ಭಗವಂತ ಒಳ್ಳೆಯದು ಮಾಡಲಿ. 30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಆದರೆ, ಅವರನ್ನು ದ್ವೇಷಿಸಲ್ಲ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದು, ನೋವು ಕೊಟ್ಟರು. ಇಂದು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಹೇಳಿದರು.
ಏನಿದು ಪ್ರಕರಣ?
ಜನವರಿ 1 ರಂದು ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಜೆಸಿಬಿ ಕೆಲಸಕ್ಕೆಂದು ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ದಲಿತ ವ್ಯಕ್ತಿ ಆಗಮನದಿಂದ ದೇವರಿಗೆ ಮೈಲಿಗೆಯಾಗಿದೆ ಎಂದು ಗ್ರಾಮಸ್ಥರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದ ದಲಿತ ಸಂಘಟನೆಗಳು, ಜನವರಿ 2 ರಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದವು.
ಇದನ್ನೂ ಓದಿ | Killer CEO : ಮಗುವನ್ನೇ ಕೊಂದ ಬುದ್ಧಿವಂತೆ; ಭೀಕರ ಕ್ರೌರ್ಯದ ಬೆಚ್ಚಿಬೀಳಿಸುವ ಕಥೆ!
ಪ್ರತಿಭಟನೆ ವೇಳೆ ದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ಗೊಲ್ಲರ ಹಟ್ಟಿ ನಿವಾಸಿಗಳು ನಿರಾಕರಿಸಿದ್ದರು. ಪೊಲೀಸರು, ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಪ್ರಕರಣ ತಣ್ಣಗಾಗಿತ್ತು. ನಂತರ ಯುವಕನ ಮೇಲೆ ಹಲ್ಲೆ ಸಂಬಂಧ 15 ಜನರ ವಿರುದ್ಧ ತರೀಕೆರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದರು. ಆದರೆ, ಗೊಲ್ಲರ ಹಟ್ಟಿ ಬಗ್ಗೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದರು.