Site icon Vistara News

Dancing in nature: ಅವನಿ ವಿಹಾರಂ- ಪ್ರಕೃತಿಯ ಮಡಿಲಲ್ಲಿ ಭರತನಾಟ್ಯ ವೈಭವಂ..! ಕನಕಮಜಲಿನಲ್ಲಿ ವೈಶಿಷ್ಟ್ಯಪೂರ್ಣ ಶಿಬಿರ

avani viharam Sullia

#image_title

ಗಂಗಾಧರ ಕಲ್ಲಪಳ್ಳಿ. ವಿಸ್ತಾರ ನ್ಯೂಸ್‌, ಸುಳ್ಯ
ಹಸಿರು ಪ್ರಕೃತಿಯ ಮಧ್ಯೆ ತಾಳ, ಲಯ, ಸಂಗೀತ, ನೃತ್ಯದ ಧೀಂತರಿಕಿಟ (Dancing in nature). ಪ್ರಕೃತಿಯ ಆಸ್ವಾದನೆ, ಒಂದಿಷ್ಟು ಅಧ್ಯಯನ.. ಜೊತೆಗೆ ಭರತನಾಟ್ಯದ ಅಭ್ಯಾಸ.. ಕಳೆದ ಕೆಲವು ದಿನಗಳಿಂದ ಭೂರಮೆಯ ಸ್ವರ್ಗದಂತಿರುವ ಪ್ರಕೃತಿಯ ತೊಟ್ಟಿಲು ಕನಕಮಜಲಿನ ‘ಕಲಾ ಗ್ರಾಮ’ ಮೂರ್ಜೆ ಬಾಲ ನಿಲಯದ ಅಂಗಣ ಕಲೋಪಾಸನೆಯ, ಕಲಾ ಅಧ್ಯಯನದ ವೇದಿಕೆಯಾಗಿ ಬದಲಾಗಿದೆ.

ಎಲ್ಲೆಡೆ ಬೇಸಿಗೆ ಶಿಬಿರಗಳು ನಡಯುವುದು ಸಾಮಾನ್ಯವಾದರೂ ಮಂಡ್ಯ, ಮೈಸೂರುಗಳಲ್ಲಿ ಪ್ರಸಿದ್ಧ ಪಡೆದರುವ ಶ್ರೀ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ (ಶ್ರೀ ಗುರುದೇವ ಲಲಿತ ಕಲಾ ಅಕಾಡೆಮಿ) ವತಿಯಿಂದ ನಡೆದ ‘ಅವನಿ ವಿಹಾರಂ’ ಭರತನಾಟ್ಯ ವಸತಿ ಶಿಬಿರ ಮತ್ತು ಕಾರ್ಯಾಗಾರ ವಿಶೇಷ ಗಮನ ಸೆಳೆಯಿತು. ನೃತ್ಯ, ಸಂಗೀತ, ಲಯ ತಾಳಗಳು, ಗೆಜ್ಜೆಯ ನಾದಗಳು ಮೇಳೈಸಿ ಕನಕಮಜಲಿನ ಪ್ರಕೃತಿಯಲ್ಲಿ ಮಾರ್ದನಿಸಿತು.

ಅವನಿ ವಿಹಾರಂ: ಸುಳ್ಯದ ಕನಕಮಜಲಿನಲ್ಲಿ ನೃತ್ಯ ವೈಭವ

ರಾಧಾಕೃಷ್ಣ ಪಿ.ಎಂ.ಹಾಗು ಡಾ.ಚೇತನಾ ರಾಧಾಕೃಷ್ಣ ನೇತೃತ್ವದಲ್ಲಿ ಶಾಸ್ತ್ರೀಯ ಕಲೆ, ಸಂಗೀತ, ಲಲಿತ ಕಲೆಗಳ ಅಧ್ಯಯನಕ್ಕೆ ಮತ್ತು ಬೆಳವಣಿಗೆಗೆ ವಿಶೇಷ ಪ್ರಯತ್ನ ನಡೆಸುತ್ತಿರುವ ಶ್ರೀ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ದೇಶದ ವಿವಿಧ‌ ನಗರಗಳಲ್ಲಿ ನೃತ್ಯ ಕಾರ್ಯಕ್ರಮ, ಅಧ್ಯಯನ, ಕಾರ್ಯಾಗಾರ ಸೇರಿ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇದರ ಜೊತೆಗೆ ಗ್ರಾಮೀಣ ಭಾಗದ‌ ಜನರಿಗೆ ಕಲೆಯ ಆಸ್ವಾದನೆ ಹಾಗು ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕನಕಮಜಲಿನ ಕಲಾಗ್ರಾಮದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಹಾಗು ಕಲಾ ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ‌ ರಾಷ್ಟ್ರೀಯ ನೃತ್ಯೋತ್ಸವ ‘ಮೇದಿನಿ ಉತ್ಸವ’ ಕಲಾಸಕ್ತರ ಮನಸೂರೆಗೊಂಡಿತ್ತು. ಇದೀಗ ನಡೆದ ‘ಅವನಿ ವಿಹಾರಂ’ ಗುರುಕುಲ ಮಾದರಿಯ ಶಿಬಿರದಲ್ಲಿ‌ ಮಕ್ಕಳಿಗೆ ಭರತನಾಟ್ಯ ಕಲಿಕೆಗೆ ಪ್ರಾಧಾನ್ಯತೆ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಆಯ್ದ ಸುಮಾರು 40 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಅವನಿ ವಿಹಾರಂ

ಭರತನಾಟ್ಯದಲ್ಲಿನ ಆಂಗಿಕ ಚಲನೆ, ಮುದ್ರೆಗಳು, ಯೋಗಾಸನಗಳು, ಸಂಗೀತಗಳು, ನೃತ್ಯಗಳು, ಹಾವ ಭಾವ ಸೇರಿದಂತೆ ಭರತ ನಾಟ್ಯದ ವಿವಿಧ ಆಯಾಮಗಳನ್ನು ಕಲಿಸಿಕೊಡಲಾಗಿದೆ. ಶ್ರೀ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನ ಕಲಾನಿರ್ದೇಶಕಿ ಹಾಗು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿಯ ಭರತನಾಟ್ಯ ವಿಭಾಗದ ಮುಖ್ಯಸ್ಥೆ ಡಾ.ಚೇತನಾ ರಾಧಾಕೃಷ್ಣ ಪಿ.ಎಂ. ನೇತೃತ್ವದಲ್ಲಿ ಭರತನಾಟ್ಯ ಶಿಬಿರ ನಡೆಸಲಾಯಿತು. ಜೊತೆಗೆ ನೃತ್ಯ ಗುರುಗಳಾದ ಡಾ.ಮಾನಸಾ ಹಾಗು ಡಾ.ಸಹನಾರಾಜು ಅವರು ಕಾರ್ಯಾಗಾರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಭರತನಾಟ್ಯದ ವಿವಿಧ ಆಯಾಮಗಳನ್ನು ಕಲಿಸಿಕೊಟ್ಟರು. ಚಂದ್ರಶೇಖರ ಕನಕಮಜಲು ಯೋಗಾಸನ ಕಲಿಸಿಕೊಟ್ಟರು.

ಜೊತೆಗೆ ಕಾಡು, ಮೇಡುಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು ಪ್ರಕೃತಿಯ ಬಗ್ಗೆ ಅರಿವು ಮೂಡಿಸಲಾಯಿತು. ಮಕ್ಕಳಿಗೆ ಧ್ಯಾನ, ಭಜನೆ, ಟೆಂಟ್ ಹಾಕಿ ಕ್ಯಾಂಪ್ ಫೈರ್, ಹನುಮ ಗಿರಿ ಭೇಟಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದ‌ ಮಕ್ಕಳಿಗೆ ಗ್ರಾಮೀಣ ಬದುಕಿನ, ಪ್ರಕೃತಿಯ ಆಸ್ವಾದನೆಯನ್ನು ತಿಳಿಸಬೇಕು ಮತ್ತು ಗ್ರಾಮೀಣ ಮಕ್ಕಳಿಗೆ ಭಾರತೀಯ ಕಲೆಗಳ ಬಗ್ಗೆ ಕಲಿಸಬೇಕು ಎಂಬ ನೆಲೆಯಲ್ಲಿ ಶಿಬಿರ ಏರ್ಪಡಿಸಲಾಗಿತ್ತು. ಭರತನಾಟ್ಯದಂತಹ ವಿಶಾಲ‌ ಮತ್ತು ವಿಸ್ತೃತ ಕಲೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕಲಿಸುವ ಪ್ರಯೋಗ ಈ ಬೇಸಿಗೆ ಶಿಬಿರದಲ್ಲಿ ಮಾಡಲಾಗಿದೆ ನೃತ್ಯ, ಸಂಗೀತ, ಕಲಾ ಪ್ರಕಾರ ಶೈಲಿಯ ಬಗ್ಗೆ ಮಕ್ಕಳಿಗೆ ಚೊಕ್ಕವಾಗಿ ತಿಳಿಸಿ ಕೊಡಲಾಗುತ್ತದೆ ಎನ್ನುತ್ತಾರೆ ಡಾ.ಚೇತನಾ ರಾಧಾಕೃಷ್ಣ.

ಭರತನಾಟ್ಯ ಶಿಬಿರದ ದೃಶ್ಯ

ಗುರುದೇವ ಅಕಾಡೆಮಿ ವತಿಯಿಂದ ಮಂಡ್ಯ, ಮೈಸೂರಿನಲ್ಲಿ 27 ವರ್ಷಗಳಿಂದ ಕಲಾ ಸೇವೆಯನ್ನು ನಡೆಸುತ್ತಾ ಬಂದಿದ್ದೇವೆ. ಅನೇಕ ವಿದ್ಯಾರ್ಥಿಗಳು ಕಲಿತು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಕಲಾ ಸೇವೆ, ನೃತ್ಯೋತ್ಸವ, ಕಾರ್ಯಾಗಾರ ನಡೆಸುತ್ತಾ ಬಂದಿದ್ದೇವೆ. ಕಳೆದ 5 ವರ್ಷಗಳಿಂದ ಪ್ರಕೃತಿಯ ನಡುವಿನಲ್ಲಿ ವಸತಿ ಕಲಾ ಶಿಬಿರವನ್ನು ನಡೆಸುತ್ತಾ ಬಂದಿದ್ದೇವೆ. ಐದು ದಿನ ಪ್ರಕೃತಿಯ ಸುಂದರ ವಾತಾವರಣವನ್ನು ಅನುಭವಿಸಿ ಮಕ್ಕಳಿಗೆ ನೃತ್ಯಕ್ಕೆ ಸಂಬಂಧಿಸಿ ಎಲ್ಲಾ ಆಯಾಮಗಳನ್ನು ಕಲಿಸುತ್ತಾ ಬಂದಿದ್ದೇವೆ ಎನ್ನುವುದು ಶ್ರೀ ಗುರುದೇವ ಲಲಿತ ಕಲಾ ಅಕಾಡೆಮಿಯ ಕಲಾ ನಿರ್ದೇಶಕರಾಗಿರುವ ಡಾ. ಚೇತನಾ ರಾಧಾಕೃಷ್ಣ ಮತ್ತು ರಾಧಾಕೃಷ್ಣ ಪಿಎಂ ಅವರ ನುಡಿ.

ಇದನ್ನೂ ಓದಿ : Yellapur News : ಯಲ್ಲಾಪುರದ ಭರತನಾಟ್ಯ ಕಲಾವಿದೆ ಶಮಾ ಭಾಗ್ವತ್‌ಗೆ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರ

Exit mobile version