Site icon Vistara News

Dargah Clearance | ಪೊಲೀಸ್ ಸರ್ಪಗಾವಲಿನಲ್ಲಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು

Dargah Clearance

ಹುಬ್ಬಳ್ಳಿ: ಹಲವು ವರ್ಷಗಳಿಂದ ವಿವಾದದ ಸುಳಿಯಲ್ಲಿದ್ದ ಹುಬ್ಬಳ್ಳಿಯ ಭೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹಮ್ಮದ್‌ ಶಾ ಖಾದ್ರಿ ದರ್ಗಾ ತೆರವುಗೊಳಿಸುವಲ್ಲಿ ಕೊನೆಗೂ ಧಾರವಾಡ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಬುಧವಾರ ಬೆಳ್ಳಂಬೆಳಗ್ಗೆ ಘರ್ಜನೆ ಆರಂಭಿಸಿದ ಜೆಸಿಬಿಗಳು ವಿವಾದಿತ ಸ್ಥಳವನ್ನು ತೆರವುಗೊಳಿಸಿದವು (Dargah Clearance). ಮುಸ್ಲಿಮರ ತೀವ್ರ ವಿರೋಧದ‌ ನಡುವೆಯೂ ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯಾಚರಣೆ ನಡೆಯಿತು.

ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನಾ ವ್ಯಾಪ್ತಿಯಲ್ಲಿ ಬರುವ ಭೈರಿದೇವರಕೊಪ್ಪ ದರ್ಗಾ ತೆರವಿಗೆ ಮಂಗಳವಾರ ತಡರಾತ್ರಿಯಿಂದಲೇ ಎಚ್‌ಡಿ ಬಿಆರ್‌ಟಿಎಸ್‌ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದವು. ಸಾವಿರಾರು ಪೊಲೀಸರ ಸರ್ಪಗಾವಲಿನಲ್ಲಿ ದರ್ಗಾ ತೆರವುಗೊಳಿಸಲಾಯಿತು.

ಅತಿ ಸೂಕ್ಷ್ಮ ವಿಚಾರ ಆಗಿದ್ದರಿಂದ ತೆರವು ಕಾರ್ಯಾಚರಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಧಾರವಾಡ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ಆಯಕಟ್ಟಿನ ಸ್ಥಳದಲ್ಲಿ ನಿಷೇಧಾಜ್ಞೆ ವಿಧಿಸಿತ್ತು. ಜನ ನಿದ್ದೆ ಮಂಪರಿನಿಂದ ಹೊರ ಬರುವಷ್ಟರಲ್ಲೇ ಸ್ಥಳವನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಂಡಿದ್ದ ಪೊಲೀಸರು, ಮುಸ್ಲಿಂ ನಾಯಕರು ಮತ್ತು ಸಮುದಾಯದವರ ವಿರೋಧದ ಮಧ್ಯೆಯೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. ಸರ್ಕಾರದ ಈ ನಿರ್ಧಾರಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಬೇಸರ ವ್ಯಕ್ತಪಡಿಸಿ, ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ | Namma Clinic | ರಾಜ್ಯದಲ್ಲಿ 48 ಹೊಸ ಪಿಎಚ್‌ಸಿ, 12 ಕಿಮೋಥೆರಪಿ ಸೆಂಟರ್‌ಗಳ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

ಭೈರಿದೇವರಕೊಪ್ಪ ದರ್ಗಾವು ಯೋಜನಾ ವ್ಯಾಪ್ತಿಗೆ ಬರುತ್ತದೆ ಎಂದು ಬಿಆರ್‌ಟಿಎಸ್‌ನವರು ಭೂಸ್ವಾಧೀನ ಪ್ರಕ್ರಿಯೆ ಜರುಗಿಸಲು 2016ರಲ್ಲಿ ದರ್ಗಾ ಕಮಿಟಿಯವರಿಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ದರ್ಗಾದವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ವ್ಯಾಜ್ಯ ಸ್ಥಳೀಯ ನ್ಯಾಯಾಲಯದಿಂದ ಹೈಕೋರ್ಟ್‌ವರೆಗೆ ಹೋಗಿತ್ತು. ಡಿಸೆಂಬರ್ 16ರಂದು ಹೈಕೋರ್ಟ್ ಉದ್ದೇಶಿತ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳುವಂತೆ ತೀರ್ಪು ನೀಡಿತ್ತು.

ಬಿಆರ್‌ಟಿಎಸ್ ಮಾರ್ಗವು ಹುಬ್ಬಳ್ಳಿ ಮತ್ತು ಧಾರವಾಡನಗರ ವ್ಯಾಪ್ತಿಯಲ್ಲಿ 36 ಮೀಟರ್ ಅಗಲವಿದ್ದು, ಮಧ್ಯದಲ್ಲಿ 44 ಮೀಟರ್ ಅಗಲವಿದೆ. ಭೈರಿದೇವರಕೊಪ್ಪ ದರ್ಗಾವು 44 ಮೀಟರ್ ವ್ಯಾಪ್ತಿಯೊಳಗೆ ಇದೆ. ರಸ್ತೆ ಮಧ್ಯದಿಂದ ಎರಡೂ ಕಡೆ 22 ಮೀಟರ್ ಪ್ರದೇಶವು ಬಿಆರ್‌ಟಿಎಸ್ ಯೋಜನಾ ವ್ಯಾಪ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಸಹಕಾರ ನೀಡುವಂತೆ ಬಿಆರ್‌ಟಿಎಸ್‌ ಅಧಿಕಾರಿಗಳು ಕೋರಿದ್ದರು.

ಈ ಬಗ್ಗೆ ದರ್ಗಾ ಕಮಿಟಿಯವರೊಂದಿಗೂ ಮಾತುಕತೆ ನಡೆದಿದ್ದರು. ಆದರೂ ಕೆಲ ಮುಸ್ಲಿಂ ಮುಖಂಡರು, ದೇವಸ್ಥಾನದ ವಿಗ್ರಹಗಳನ್ನು ಬೇರೆಡೆ ಸ್ಥಳಾಂತರಿಸಬಹುದು. ಆದರೆ ದರ್ಗಾದಲ್ಲಿರುವ ಧರ್ಮ ಗುರುಗಳ ಗೋರಿಯನ್ನು ಹೇಗೆ ಸ್ಥಳಾಂತರಿಸುವುದು, ಸ್ವಲ್ಪ ಸಮಯ ನೀಡಿದರೆ ವೈಜ್ಞಾನಿಕವಾಗಿ ಗೋರಿ ಸ್ಥಳಾಂತರ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಾದಿತ ದರ್ಗಾ ತೆರವಿಗೂ ಮುನ್ನ ಮುಸ್ಲಿಂ ಧರ್ಮದ ವಿಧಿ ವಿಧಾನವನ್ನು ಪಾಲಿಸಲು ಐವರು ಮೌಲ್ವಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ದರ್ಗಾ ತೆರವು ಕಾರ್ಯಾಚರಣೆಗೂ ಹಲವು ವರ್ಷಗಳ ಮೊದಲೇ ಅದಕ್ಕೆ ಸೂಕ್ತ ಪರಿಹಾರದ ಮೊತ್ತ ಮತ್ತು ಜಾಗವನ್ನು ಸರ್ಕಾರ ನೀಡಿತ್ತು.

ಇದನ್ನೂ ಓದಿ | ರಾವತ್ ಅಸಂಬದ್ಧ ಹೇಳಿಕೆಗಳ ರಾಜಕಾರಣ: ಕರ್ನಾಟಕಕ್ಕೆ ನುಗ್ಗುವ ಬೆದರಿಕೆಗೆ ಸಚಿವ ಸುನಿಲ್ ಕುಮಾರ್ ತಿರುಗೇಟು

Exit mobile version