ವಿಜಯನಗರ: ಹಂಪಿ ಉತ್ಸವ (Hampi Utsav) ವೀಕ್ಷಿಸಲು ಎರಡನೇ ದಿನವಾದ ಶನಿವಾರವೂ ಜನ ಸಾಗರವೇ ಹರಿದುಬಂದಿತ್ತು. ಇದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. ನೆಚ್ಚಿನ ಡಿ ಬಾಸ್‌ನ ನೋಡಲು ವಿವಿಧೆಡೆಯಿಂದ ಸಾವಿರಾರು ಅಭಿಮಾನಿಗಳು ಹಂಪಿಗೆ ಆಗಮಿಸಿದ್ದರು. ವೇದಿಕೆಯಲ್ಲಿ ದರ್ಶನ್ ಅವರು ತಮ್ಮ ಸಿನಿಮಾಗಳ ಮಾಸ್ ಡೈಲಾಗ್‌ಗಳನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ವೇಳೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ, ಜೈಕಾರದ ಘೋಷಣೆಗಳು ಮೊಳಗಿದವು.
“ಎತ್ತಿದ್ರೆ ಗದೆ, ಇಳಿಸಿದ್ರೆ ಒದೆನೇ” , “ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ…” ಎಂದು ಸುಂಟರ ಗಾಳಿ ಮತ್ತು ಕಾಟೇರ ಸಿನಿಮಾಗಳ ಡೈಲಾಗ್ ಹೇಳುವ ಮೂಲಕ ದರ್ಶನ್ ಅವರು ಅಭಿಮಾನಿಗಳನ್ನು ರಂಜಿಸಿದರು.
ನಂತರ ದರ್ಶನ್ ಅವರು ಮಾತನಾಡಿ, 2018ರಲ್ಲಿ ಹಂಪಿ ಉತ್ಸವಕ್ಕೆ ಬಂದಿದ್ದೆ, 2024ರಲ್ಲಿ ಮತ್ತೆ ವಾಪಸ್ ಹಂಪಿಗೆ ಬಂದಿದ್ದೇನೆ. ಐದು ವರ್ಷದ ಬಳಿಕ ಮತ್ತೆ ವಾಪಸ್ ಬಂದಿದ್ದೇನೆ. ಶ್ರೀಕೃಷ್ಣ ದೇವರಾಯರ ಆಳ್ವಿಕೆ ಮಾಡಿದ ಸಾಮ್ರಾಜ್ಯ ಇದು. ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಶ್ರೀಕೃಷ್ಣ ದೇವರಾಯನ್ನು ಜೀವನದಲ್ಲಿ ನೆನಸಿಕೊಳ್ತೇನೆ. ಇಷ್ಟೊಂದು ಜನ ಹಂಪಿ ಉತ್ಸವಕ್ಕೆ ಬಂದಿದ್ದೀರಿ ಧನ್ಯವಾದ ಎಂದು ಹೇಳಿದರು.
ತಾವಿಲ್ಲಿ ಸೇರಿದ್ದಕ್ಕೆ ಬಲವಾದ ಕಾರಣ ಇದೆ. ನಾನಿಲ್ಲಿ ಬರೋದಕ್ಕೆ ಒಂದೇ ಕಾರಣ ಜಮೀರ್ ಭಾಯ್. ನನ್ನನ್ನು ಡಿ ಬಾಸ್ ಅಂತಾರೆ, ಜಮೀರ್‌ಗೆ ಭಾಯ್ ಅಂತ ಕರೆಯುತ್ತಾರೆ. ನಾನು ಯಾರಿಗೂ ಸೋಲಲ್ಲ, ಅಯ್ಯ, ಅಣ್ಣ ಅಂತ ಸೊಪ್ಪು ಹಾಕೋದಕ್ಕೆ ಆಗಲ್ಲ. ಜಮೀರ್ ಭಾಯ್ ಮನೆಯಲ್ಲಿನ ಒಂದೇ ಒಂದು ಕಾರ್ಯಕ್ರಮಕ್ಕೆ ಕರೆದಿಲ್ಲ. ಯಾವುದೋ ರಾಮನಗರ ಕಾರ್ಯಕ್ರಮಕ್ಕೆ ಕರೆದಿದ್ದರು. ಅನೇಕ ಬಾರಿ ಕ್ಯಾಂಪೇನ್ ಮಾಡಿದ್ದೇನೆ. ಆದರೆ ಜಮೀರ್ ಭಾಯ್ ನನ್ನನ್ನು ಒಂದು ಒಂದು ಬಾರಿಯೂ ಪ್ರಚಾರಕ್ಕೆ ಕರೆದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಕಲಿಸಲು ತುಂಬಾ ಜನರಿಗೆ ಜಮೀರ್ ಅಹ್ಮದ್ ಅವರು ಸಹಾಯ ಮಾಡಿದ್ದಾರೆ. ನಾನು ಕಳುಹಿಸಿದವರಿಗೆ ವಿದೇಶಕ್ಕೆ ತೆರಳಲು ಸಹಾಯ ಮಾಡಿದ್ದಾರೆ. ಮಂಡ್ಯದಲ್ಲಿ ಮನುಯ್ಯಪ್ಪ ಅಂತ ನನ್ನ ಸ್ನೇಹಿತ ಇದ್ದಾನೆ. ಆತ ಒಂದು ದೇಗುಲ ಜೀರ್ಣೋದ್ಧಾರ ಮಾಡಬೇಕಿದೆ ಅಂತ ಹೇಳಿದ್ದ. ಜಮೀರ್ ಭಾಯ್ ಮಗ ಝೈದ್ ಖಾನ್ ಐದು ಲಕ್ಷ ಹಣ ಕೊಟ್ಟಿದ್ದರು. ಹೀಗೆ ಮಾಡಿದ ಒಳ್ಳೆಯ ಕೆಲಸವನ್ನು ಜಮೀರ್ ಭಾಯ್ ಎಲ್ಲೂ ಹೇಳಿಕೊಳ್ಳಲ್ಲ ಎಂದು ಸಚಿವ ಜಮೀರ್ ಅಹ್ಮದ್ ಅವರನ್ನು ಹೊಗಳಿದರು.
ಇದನ್ನೂ ಓದಿ | Hampi Utsav 2024: ಹಂಪಿ ಉತ್ಸವದಲ್ಲಿ ಪ್ರೇಕ್ಷಕರ ಮನಗೆದ್ದ ಬಯಲು ಕುಸ್ತಿ ಸ್ಪರ್ಧೆ
ವಿಜಯನಗರ ಸಾಮ್ರಾಜ್ಯವನ್ನು ಹೀಗೆ ಉಳಿಸಿಕೊಳ್ಳಬೇಕು. ಅರುಣ್ ಸಾಗರ್ ಒಳ್ಳೆಯ ಸೆಟ್ ಹಾಕಿದ್ದಾರೆ ಎನ್ನುತ್ತಾ, ಥ್ಯಾಂಕ್ಯು ಚಿನ್ನಾ ಐ ಲವ್ ಯು ಅಂತ ಹೇಳಿದ ದರ್ಶನ್, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಕಲಾವಿದರಲ್ಲಿ ಯಾವುದೇ ಸ್ವಾರ್ಥ ಇರೋದಿಲ್ಲ. ನಮ್ಮಂತಹ ಚಿಕ್ಕ ಚಿಕ್ಕ ಕಲಾವಿದರಿಗೆ ಹಾರೈಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಜಗಪ್ಪ, ಸುಶ್ಮಿತಾ ದಂಪತಿ ಕಾಲೆಳೆದರು.