Site icon Vistara News

Datta jayanti | ಅನಸೂಯಾ ಯಾತ್ರೆಗೆ ಅದ್ಧೂರಿ ಚಾಲನೆ; ದತ್ತಪೀಠದತ್ತ ದತ್ತಾತ್ರೇಯನ ಭಕ್ತರು

datta jayanti ಅನಸೂಯಾ ಯಾತ್ರೆ ದತ್ತಪೀಠ ದತ್ತಾತ್ರೇಯ ಸಂಕೀರ್ತನಾ ಯಾತ್ರೆ

ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಡಿಸೆಂಬರ್‌ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿ (Datta jayanti) ಅಂಗವಾಗಿ ಮಂಗಳವಾರ (ಡಿ.೬) ವಿವಿಧ ಕಾರ್ಯಕ್ರಮಗಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ನಗರದ ಬೀದಿಗಳೆಲ್ಲ ಕೇಸರಿಮಯವಾಗಿದೆ, ಎಲ್ಲ ಕಡೆ ಸಂಭ್ರಮ ಕಳೆ ಕಟ್ಟಿದೆ. ಇದರ ಭಾಗವಾಗಿ ಬೆಳಗ್ಗೆ ಬೃಹತ್‌ ಸಂಕೀರ್ತನಾ ಯಾತ್ರೆಗೆ ಚಾಲನೆ ದೊರೆತಿದ್ದು, ಮಹಿಳೆಯರಿಂದ ಅನಸೂಯಾ ಯಾತ್ರೆ ಕಳೆಗಟ್ಟಿದೆ.

ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಬೆಳಗ್ಗೆ ೮ ಗಂಟೆ ಸುಮಾರಿಗೆ ಸಾವಿರಾರು ಮಂದಿ ಜಮಾಯಿಸಿದ್ದರು. 5 ಸಾವಿರಕ್ಕೂ ಅಧಿಕ ಮಹಿಳೆಯರಿಂದ ಅನಸೂಯಾ ಯಾತ್ರೆಯು ಆರಂಭವಾಗಿದ್ದು, ಕೇಸರಿ ಸೀರೆ ತೊಟ್ಟು, ಕೇಸರಿ ಧ್ವಜವನ್ನು ಹಿಡಿದು ನಗರದುದ್ದಕ್ಕೂ ಮೆರವಣಿಗೆ ಸಾಗಿದ್ದಾರೆ. ಐ.ಜಿ.ರಸ್ತೆ ಮೂಲಕ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಮೆರವಣಿಗೆ ಸಾಗಿದ್ದು, ಬಳಿಕ ದತ್ತಪೀಠದತ್ತ ಸಂಚರಿಸಿದ್ದಾರೆ. ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಿ, ಬಳಿಕ ನಡೆಯಲಿರುವ ಹೋಮ-ಹವನಗಳಲ್ಲಿ ಮಹಿಳೆಯರು ಭಾಗಿಯಾಗಲಿದ್ದಾರೆ.

datta jayanti ಅನಸೂಯಾ ಯಾತ್ರೆ ದತ್ತಪೀಠ ದತ್ತಾತ್ರೇಯ ಸಂಕೀರ್ತನಾ ಯಾತ್ರೆ ಪೊಲೀಸ್‌ ರೂಟ್‌ ಮಾರ್ಚ್‌

ಗಮನ ಸೆಳೆದ ಮಕ್ಕಳ ನೃತ್ಯ
ಅನಸೂಯಾ ಯಾತ್ರೆಯಲ್ಲಿ ಮಕ್ಕಳ ನೃತ್ಯ ಗಮನ ಸೆಳೆದಿದ್ದು, ನೂರಾರು ಮಕ್ಕಳಿಂದ ರಸ್ತೆಯುದ್ದಕ್ಕೂ ನೃತ್ಯ, ಭಜನೆಗಳು ನಡೆದವು. ತಾಳಗಳನ್ನು ಹಿಡಿದು ಹಾಡುಗಳಿಗೆ ನೃತ್ಯ ಹಾಕಿದ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು. ಇದೇ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಂದ ದತ್ತಾತ್ರೇಯನ ಭಜನೆ, ಹಿಂದು ಪರ ಘೋಷಣೆಗಳು ಮೊಳಗಿದವು. ಸಂಕೀರ್ತನಾ ಯಾತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಮಲಾ ಸುಂದರ್, ಶಾಸಕ ಸಿ.ಟಿ. ರವಿ, ಉಡುಪಿಯ ಸುರೇಖಾ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ | ದತ್ತ ಪೀಠ ವಿವಾದ |‌ ದತ್ತಪೀಠದ ಇತಿಹಾಸದಲ್ಲೇ ಮೊದಲ ಬಾರಿಗೆ ದತ್ತಾತ್ರೇಯನಿಗೆ ಸಂದ ಪೂಜೆ

ನಾಳೆ ದತ್ತ ಮಾಲಾಧಾರಿಗಳ ಮೆರವಣಿಗೆ
ಬುಧವಾರ (ಡಿ. ೭) ರಾಜ್ಯದ ಮೂಲೆ ಮೂಲೆಯಿಂದ ಬರುವ ಸುಮಾರು ೧೫ರಿಂದ ೨೦ ಸಾವಿರ ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿನಲ್ಲಿ ಮೆರವಣಿಗೆ ಸಾಗಲಿದ್ದಾರೆ. ಡಿಸೆಂಬರ್‌ ೮ರ ಗುರುವಾರ ಮಾಲೆ ವಿಸರ್ಜನೆ ಮಾಡಲಿರುವ ದತ್ತ ಮಾಲಾಧಾರಿಗಳು, ದತ್ತಪೀಠದಲ್ಲಿ ಪಾದುಕೆ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದತ್ತಪೀಠದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅರ್ಚಕರನ್ನು ನೇಮಕ ಮಾಡಿರುವುದರಿಂದ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.

datta jayanti ಅನಸೂಯಾ ಯಾತ್ರೆ ದತ್ತಪೀಠ ದತ್ತಾತ್ರೇಯ ಸಂಕೀರ್ತನಾ ಯಾತ್ರೆ ಪೊಲೀಸ್‌ ರೂಟ್‌ ಮಾರ್ಚ್‌

ಬಿಗಿ ಪೊಲೀಸ್‌ ಬಂದೋಬಸ್ತ್‌
ನಗರ ಹಾಗೂ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಭದ್ರತೆಗಾಗಿ 4500ಕ್ಕೂ ಹೆಚ್ಚು ಪೋಲಿಸರ ನಿಯೋಜನೆ ಮಾಡಲಾಗಿದೆ. ಇದರ ಭಾಗವಾಗಿ ಸೋಮವಾರ (ಡಿ.೫) ಚಿಕ್ಕಮಗಳೂರಿನ ಪ್ರಮುಖ ಬೀದಿಗಳಲ್ಲಿ ಪೊಲೀಸರು ರೂಟ್‌ ಮಾರ್ಚ್‌ ನಡೆಸಿದ್ದರು.

ಇದನ್ನೂ ಓದಿ | Doctor death | ಡಾ. ರೂಪಾ ಸಾವಿಗೆ ಟ್ವಿಸ್ಟ್‌: ಕಾಲು ಜಾರಿ ಬಿದ್ದದ್ದಲ್ಲ, ತಲೆಯಲ್ಲಿದೆ ಗುಂಡಿನ ಗಾಯ: ಪೋಸ್ಟ್‌ ಮಾರ್ಟಂ ವರದಿ

Exit mobile version