ಚಿಕ್ಕಮಗಳೂರು: ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನದ (Datta Jayanti) ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಶೋಭಾ ಯಾತ್ರೆ ಅಪಾರ ದತ್ತ ಭಕ್ತ ಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿತು.
ನಗರದ ಕಾಮಧೇನು ದೇವಾಲಯದಿಂದ ಶೋಭಾ ಯಾತ್ರೆ ಆರಂಭವಾಗಿ ಎಂ.ಜಿ ರಸ್ತೆಯ ಮೂಲಕ ಸಾಗಿ ಆಜಾದ್ ವೃತ್ತ ತಲುಪಿತು. ರಸ್ತೆ ಬದಿಯಲ್ಲಿ ನೆರೆದ ಸಾವಿರಾರು ಸಾರ್ವಜನಿಕರು ಶೋಭಾ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಯಾತ್ರೆಗೆ ಡೊಳ್ಳು ಕುಣಿತ, ವೀರಗಾಸೆ, ಚಂಡೆವಾದ್ಯ, ಡಿಜೆ ಹಾಗೂ ವಿವಿಧ ಕಲಾ ತಂಡಗಳು ಮೆರುಗು ನೀಡಿದವು.
ಡಿಜೆ, ಡೊಳ್ಳುಕುಣಿತ, ತಮಟೆ ಸದ್ದಿಗೆ ಕೇಸರಿ ಶಾಲು ಧರಿಸಿ ಬಾವುಟಗಳನ್ನು ಹಿಡಿದಿದ್ದ ದತ್ತ ಭಕ್ತರು ಹಾಗೂ ಹಿಂದು ಕಾರ್ಯಕರ್ತರು ಭರ್ಜರಿಯಾಗಿ ಕುಣಿದರು. ಶೋಭಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 30 ಸಾವಿರಕ್ಕೂ ಅಧಿಕ ದತ್ತಭಕ್ತರು ಪಾಲ್ಗೊಂಡಿದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಮಂಗಳವಾರ ದತ್ತಪೀಠಕ್ಕೆ ಸಾಗುವ ಮಾರ್ಗ ಮಧ್ಯೆ ರಸ್ತೆಯಲ್ಲಿ ಮೊಳೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ನಾಳೆ ದತ್ತ ಪೀಠದಲ್ಲಿ ವಿಶೇಷ ಪೂಜೆ
ದತ್ತ ಜಯಂತಿ ಹಿನ್ನೆಲೆಯಲ್ಲಿ ಡಿ.8 ರಂದು ಬಾಬಾಬುಡನ್ ಗಿರಿಯ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ನಡೆಯಲಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಭಕ್ತರು ದತ್ತ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದತ್ತಪೀಠದಲ್ಲಿ ಹಿಂದು ಅರ್ಚಕರಿಂದ ಪೂಜೆ ನಡೆಯುತ್ತಿರುವುದರಿಂದ ಸಾವಿರಾರು ದತ್ತಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ | CT Ravi | ನನ್ನನ್ನು ಮುಲ್ಲಾ ಅಂದ್ರೆ ಮುಲ್ಲಾಗಳೂ ಒಪ್ಪಲ್ಲ, ನಾನು ಏನಿದ್ದರೂ ಹಿಂದು ಹುಲಿ ಅಂದರು ಸಿ.ಟಿ. ರವಿ