ದಾವಣಗೆರೆ: ಭದ್ರಾ ನೀರು ಬಿಡುವಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸೆ.25 ರಂದು ದಾವಣಗೆರೆ ಬಂದ್‌ಗೆ (Davanagere bandh) ಕರೆ ನೀಡಿದ್ದರು. ರೈತರ ಹೋರಾಟಕ್ಕೆ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳು ಸಾಥ್ ನೀಡಿದ್ದವು. ಬೈಕ್‌ಗಳಲ್ಲಿ ನಗರದಾದ್ಯಂತ ಸಂಚರಿಸಿ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲಿಸುವಂತೆ ರೈತರು ಮನವಿ ಮಾಡಿದರು. ಆದರೆ ಭಾರತೀಯ ರೈತ ಒಕ್ಕೂಟ ನೀಡಿದ್ದ ದಾವಣಗೆರೆ ಬಂದ್‌ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಆಟೋ ಹಾಗೂ ಇತರೆ ವಾಹನಗಳ ಸಂಚಾರವೂ ಸಹಜ ಸ್ಥಿತಿಯಲ್ಲಿದ್ದವು. ಬೆಳಗ್ಗೆ 10 ಗಂಟೆ ನಂತರ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ದಾವಣಗೆರೆ ಬಂದ್‌ನಲ್ಲಿ ಬೆರಳೆಣಿಕೆ ರೈತರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾದರು. ಭದ್ರಾ ನೀರು ಹರಿಸುವಂತೆ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ಗಾಂಧಿ ವೃತ್ತದಲ್ಲಿ ಟೈರ್ ಸುಟ್ಟು ರೈತರು ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಬೈಕ್ ರ‍್ಯಾಲಿ ಮೂಲಕ ಘೋಷಣೆ ಕೂಗಿದರು.
ಇದನ್ನೂ ಓದಿ: Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!
ಕುಸಿದು ಬಿದ್ದ ರೈತ
ಪ್ರತಿಭಟನೆ ಮಾಡುವಾಗ ರೈತ ಮುಖಂಡರೊಬ್ಬರು ಕುಸಿದು ಬಿದ್ದ ಘಟನೆಯು ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾಗ ಜಯದೇವ ಸರ್ಕಲ್‌ನಲ್ಲಿ ರೈತ ಮುಖಂಡ ನಾಗೇಶ್ವರ್ ರಾವ್ ಕುಸಿದು ಬಿದ್ದರು. ಕೂಡಲೇ ಆಂಬ್ಯೂಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು.
ಬಸ್ ತಡೆದು ಆಕ್ರೋಶ
ದಾವಣಗೆರೆ ಬಂದ್‌ಗೆ ಕರೆ ನೀಡಿದ್ದರೂ ಖಾಸಗಿ ಹಾಗೂ ಸರ್ಕಾರಿ ಬಸ್ ಓಡಾಟ ನಡೆಸಿದ್ದಕ್ಕೆ ಭಾರತೀಯ ರೈತ ಒಕ್ಕೂಟದ ಮುಖಂಡರು ಆಕ್ರೋಶ ಹೊರಹಾಕಿದರು. ಜಯದೇವ ಸರ್ಕಲ್‌ನಲ್ಲಿ ಬಸ್ ತಡೆದು ಕಿಡಿಕಾರಿದರು.
ಹಣ್ಣಿನ ಅಂಗಡಿಯಲ್ಲಿದ್ದ ಹಣ್ಣುಗಳನ್ನ ಬಿಸಾಕಿ ದೌರ್ಜನ್ಯ
ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾದರು. ಬಿಜೆಪಿ ಮಾಜಿ ಮೇಯರ್ ಅಜಯ್ ಕುಮಾರ್ ಬಂದ್ ಹೆಸರಲ್ಲಿ ದಬ್ಬಾಳಿಕೆ ನಡೆಸಿದರು.
ಹದಡಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುವಾಗ ಅಜಯ್ ಕುಮಾರ್ ಬಲವಂತವಾಗಿ ಹಣ್ಣಿನ ಅಂಗಡಿ ಬಂದ್ ಮಾಡಿಸಿದ್ದಾರೆ. ಇದೇ ವೇಳೆ ಅಂಗಡಿಯಲ್ಲಿದ್ದ ಹಣ್ಣುಗಳನ್ನು ಬಿಸಾಕಿ ದೌರ್ಜನ್ಯ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ