ದಾವಣಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR) ನರೇಗಾ (MNREGA) ಕಾಮಗಾರಿಯನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬಿದರಹಳ್ಳಿ ಗ್ರಾಮದ ಸಿದ್ದೇಶ್ ನಾಯ್ಕ್, ಲಕ್ಕಿನಕೊಪ್ಪದ ಗಿರೀಶ್ ನಾಯ್ಕ್ ಅವರುಗಳಿಂದ ದಾಂಧಲೆ ನಡೆದಿದೆ.
ಕಚೇರಿಗೆ ಆಗಮಿಸಿದ ಇಬ್ಬರು, ನರೇಗಾ ಕೆಲಸ ತಮಗೆ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಕೆಲಸ ನೀಡಲು ವಿಳಂಬ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪಿಡಿಒ ಹಾಗೂ ಸಿಬ್ಬಂದಿ ವಿರೋಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ಅಧೀಕಾರಿಗಳನ್ನು ನಿಂದಿಸಿ ಕಚೇರಿಯಲ್ಲಿದ್ದ ಕುರ್ಚಿ, ಕಿಟಕಿ ಗಾಜು ಪುಡಿ ಪುಡಿ ಮಾಡಿ ದಾಂಧಲೆ ಮಾಡಿದ್ದಾರೆ.
ಇಬ್ಬರ ಕೃತ್ಯದಿಂದ ಸರ್ಕಾರಿ ಕೆಲಸಕ್ಕೆ ಅಡ್ಡಿ ಆಗಿದೆ ಎಂದು ಪಿಡಿಒ ಹಾಗೂ ಸಿಬ್ಬಂದಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನ ಆಧಾರದಲ್ಲಿ ಸಿದ್ದೇಶ್ ನಾಯ್ಕ್ ಹಾಗೂ ಗಿರೀಶ್ ನಾಯ್ಕ್ ಅವರುಗಳನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕದ್ದ ಮಗುವನ್ನು ಹಿಂದಿರುಗಿಸಿದ ಮಹಿಳೆ: 20 ದಿನದ ಬಳಿಕ ಪತ್ತೆಯಾದ ನವಜಾತ ಶಿಶು