Site icon Vistara News

Davanagere News: ಅಗಲಿದ ಪತ್ನಿ ನೆನಪಲ್ಲಿ ಆರೈಕೆ ಫೌಂಡೇಷನ್‌ ಸ್ಥಾಪಿಸಿದ ವೈದ್ಯ; ಉಚಿತ ಆಂಬ್ಯುಲೆನ್ಸ್‌ ಸೇವೆಯೂ ಆರಂಭ

#image_title

ದಾವಣಗೆರೆ: “ಪ್ರೀತಿ-ಆರೈಕೆ ಫೌಂಡೇಶನ್ ನನ್ನದು ಎಂಬ ಭಾವಕ್ಕಿಂತ ನಮ್ಮದು ಎಂಬ ಭಾವ ನನ್ನಲ್ಲಿದೆ. ಪ್ರೀತಿ-ಆರೈಕೆ ಫೌಂಡೇಶನ್ ಜತೆಗೆ ನೀವೂ ಸೇರಿಕೊಳ್ಳಿ ಎನ್ನುವುದಕ್ಕಿಂತ, ನಿಮ್ಮ ಜತೆ ಫೌಂಡೇಶನ್ ಸೇರಿಕೊಳ್ಳಲಿ ಎಂಬ ಬಯಕೆ ನಮ್ಮದು” ಎಂದು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿ ಕುಮಾರ್ ಟಿ.ಜಿ. ಹೇಳಿದರು.

ಪ್ರೀತಿ-ಆರೈಕೆ ಫೌಂಡೇಶನ್ ಉದ್ಘಾಟನೆ, ನಿವೃತ್ತ ಸೈನಿಕರಿಗೆ ಸನ್ಮಾನ, ಹೆಲ್ತ್ ಕಾರ್ಡ್ ವಿತರಣೆ, ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಫೌಂಡೇಶನ್ ಉದ್ಘಾಟನೆಯ ಮೂಲಕ ಮುಂದಿನ ಬದುಕಿನ ಅರ್ಥಪೂರ್ಣ ಅಧ್ಯಾಯವು ಪ್ರಾರಂಭವಾದ ಅನುಭವವು ನಮಗಾಗಿದೆ. ಬದುಕು ನಮಗೆ ಎಲ್ಲವನ್ನೂ ಕೊಟ್ಟಿದ್ದು, ಸಮಾಜಕ್ಕೆ ನಾವು ಹೆಚ್ಚಿನದನ್ನು ಹಿಂದಿರುಗಿಸಿ ನೀಡಬೇಕು ಎಂಬುದು ನನ್ನ ಲಿಂಗೈಕ್ಯ ಶ್ರೀಮತಿ ಪ್ರೀತಿ ಅವರ ಕನಸಾಗಿತ್ತು. ಅವರ ಅಗಲಿಕೆ ನಂತರ, ಸಮಾಜ ಸೇವೆಯ ಅವರ ಹಂಬಲದ ಸಾಕಾರಕ್ಕಾಗಿ ಒಂದು ವೇದಿಕೆ ಒದಗಿಸಬೇಕು ಎಂಬ ಉದ್ದೇಶದಿಂದ ಫೌಂಡೇಶನ್ ಮಾಡಿದ್ದೇನೆ. ಯಾವುದೇ ಮತ, ಜಾತಿ, ಪಂಥ, ಕ್ಷೇತ್ರಕ್ಕೆ ಸೀಮಿತವಾಗದೆ ಪ್ರೀತಿ-ಆರೈಕೆ ಫೌಂಡೇಶನ್ ಕಾರ್ಯ ನಿರ್ವಹಿಸಲಿದೆ” ಎಂದು ಹೇಳಿದರು.

ಇದನ್ನೂ ಓದಿ: Karnataka Election : ವರುಣದಲ್ಲಿ ಸೋಮಣ್ಣಗೆ ಮತ್ತೆ ಸಂಕಟ; ಊರಿಗೇ ಪ್ರವೇಶ ನೀಡದ ಗ್ರಾಮಸ್ಥರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ತ್ಯಾಗೀಶ್ವರಾನಂದ ಸ್ವಾಮೀಜಿ ಮಾತನಾಡಿ, “ತನಗಾಗಿ ಎಲ್ಲವೂ ಬೇಕು ಎಂಬ ದಿನಮಾನದಲ್ಲಿ ನಾವಿದ್ದೇವೆ. ಇದ್ದವರನ್ನೇ ಮರೆತು ಬಿಡುವ ಯಾಂತ್ರಿಕ ಬದುಕನ್ನು ಸಾಗಿಸುತ್ತಿದ್ದೇವೆ. ಆದರೆ, ಲಿಂಗೈಕ್ಯರಾದವರ ಕನಸು, ಧ್ಯೇಯದ ಸಾಕಾರಕ್ಕಾಗಿ ಫೌಂಡೇಶನ್ ಸ್ಥಾಪಿಸುವ ಮೂಲಕ ಡಾ.ರವಿ ಕುಮಾರ್ ಅಗ್ರ ಪಂಕ್ತಿ ಹಾಕಿಕೊಟ್ಟಿದ್ದಾರೆ. ನಮ್ಮ ಸುತ್ತಲಿನವರನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೆ ದೇವರನ್ನು ಪ್ರೀತಿಸಲು ಹೇಗೆ ಸಾಧ್ಯ ಎಂಬ ಶ್ರೀ ವಿವೇಕಾನಂದರ ವಾಣಿಯಂತೆ, ಆರೈಕೆ ಆಸ್ಪತ್ರೆಯ ತಂಡದಿಂದ ಅರ್ಥಪೂರ್ಣ ಕೆಲಸವು ಪ್ರಾರಂಭವಾಗಿದೆ. ಈ ಸತ್‌ಚಿಂತನೆ, ಸನ್ಮಾರ್ಗದ ನಡೆ ನಿರಂತರವಾಗಿ ಸಾಗಲಿ” ಎಂದು ಹಾರೈಸಿದರು.

ದೇಶ ರಕ್ಷಣೆ ಮಾಡಿದ ಯೋಧರಿಗೆ ನಮ್ಮ ಕೃತಜ್ಞತೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಆರೈಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀ ಟಿ.ಜಿ. ಗುರುಸಿದ್ದನಗೌಡ ಮಾತನಾಡಿ, “ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ನಾವೇನೂ ಮಹತ್ ಕಾರ್ಯ ಮಾಡುತ್ತಿಲ್ಲ. ಬದಲಾಗಿ ಜೀವ, ಜೀವನದ ಹಂಗು ತೊರೆದು ನಮಗಾಗಿ ದೇಶ ರಕ್ಷಣೆ ಮಾಡಿದ ಯೋಧರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಭಾರತ ಸ್ವಾತಂತ್ರ್ಯದ ಆರಂಭದ ದಿನಗಳಲ್ಲಿ ಫೀಲ್ಡ್‌ ಮಾರ್ಷಲ್ ಆಗಿದ್ದ ಜನರಲ್ ಕಾರ್ಯಪ್ಪನವರು, ದೇಶದ ನಿಯಂತ್ರಣ ಸಾಧಿಸಿ ಡಿಕ್ಟೇಟರ್ ಆಗುವ ಎಲ್ಲ ಅವಕಾಶವೂ ಇತ್ತು. ಆದರೆ, ಅವರು ದೇಶದಲ್ಲಿ ಪ್ರಜಾಪ್ರಭುತ್ವ ನೆಲಸಬೇಕು ಎಂದು ನಿರ್ಧರಿಸಿ, ಜವಾಹರಲಾಲ್ ನೆಹರು ಅವರು ಪ್ರಧಾನಿ ಆಗಲು ನೆರವಾದರು. ಇಂತಹ ವೀರ ಯೋಧರ ಪರಂಪರೆಯ ತಾಯ್ನಾಡು ನಮ್ಮದು” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹದಿನಾರು ನಿವೃತ್ತ ಸೈನಿಕರಿಗೆ ಸನ್ಮಾನ ಮಾಡಿ, ಆಜೀವ ಪರ್ಯಂತ ಆರೋಗ್ಯ ತಪಾಸಣೆ ದೊರೆಯುವಂತಹ ಪ್ರೀತಿ-ಆರೈಕೆ ಹೆಲ್ತ್ ಕಾರ್ಡ್ ವಿತರಿಸಲಾಯಿತು. ದಾವಣಗೆರೆ ಜಿಲ್ಲೆಯಾದ್ಯಂತ, ದಿನದ 24 ಗಂಟೆಗಳೂ ಲಭ್ಯವಿರುವಂತೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ಡಾ. ರವಿಕುಮಾರ್ ಅವರ ಜನ್ಮದಿನ ಪ್ರಯುಕ್ತ ಆರೈಕೆ ಆಸ್ಪತ್ರೆ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಇದನ್ನೂ ಓದಿ: Karnataka Election 2023: 80 ವರ್ಷ ದಾಟಿದವರ ವೋಟಿಂಗ್‌ ಮನೆಯಿಂದಲೇ ಶುರು; ಮತದಾನ ಪ್ರಕ್ರಿಯೆ ಜೋರು

ಕಾರ್ಯಕ್ರಮದಲ್ಲಿ ಡಾ. ಹಾಲಸ್ವಾಮಿ ಕಂಬಳಿಮಠ, ಕ್ಯಾಪ್ಟನ್ ಡಾ. ಹಾಲೇಶ ಬಿ., ಡಾ. ಎಚ್.ಎಂ. ವೀರಯ್ಯ, ಡಾ. ಮಲ್ಲಿಕಾರ್ಜುನ ರೆಡ್ಡಿ, ಡಾ. ದೀಪಕ್ ಆರ್.ಎಂ., ಡಾ. ದೀಪಶ್ರೀ ಕಂಬಳಿಮಠ, ಡಾ. ಸಿದ್ಧಾರ್ಥ, ಡಾ. ಪ್ರದೀಪ್, ಡಾ. ಶ್ರೀನಿವಾಸ್, ಡಾ. ರವಿಗೌಡ್ರು, ಡಾ. ನಾಗಪ್ಪ ಕೆ ಕಡಲಿ, ನರ್ಸಿಂಗ್ ಅಧೀಕ್ಷಕಿ ರೂಪಾ ಎಚ್.ಕೆ, ರವಿರಾಜ್, ನುಂಕೇಶ್, ಕಿರಣ್, ಆರೈಕೆ ಸಿಬ್ಬಂದಿ ಇದ್ದರು.

Exit mobile version