ಚಳ್ಳಕೆರೆ: “ದಾವಣಗೆರೆ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಟಿ. ರಘುಮೂರ್ತಿಯವರು ಸತತ ಮೂರು ಬಾರಿ ಆಯ್ಕೆಯಾಗಿ ಬಂದಿದ್ದಾರೆ. ಅಲ್ಲದೆ ಚಳ್ಳಕೆರೆ ಕ್ಷೇತ್ರದಲ್ಲಿ ಅತಿ ಹೆಚ್ಚಿನದಾಗಿ ಅನುದಾನವನ್ನು ತಂದು ಈ ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡಿದ್ದಾರೆ” ಎಂದು ರೈತ ಸಂಘದ ಮುಖಂಡ ಕೆ.ಪಿ.ಬೂತಯ್ಯ (Davanagere News) ಹೇಳಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಬೂತಯ್ಯ ಅವರು, “ಬಿಜೆಪಿಯ ದುರಾಡಳಿತದಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಬಿಜೆಪಿಯವರು ಮಾಡಿರುವ 40 ಪರ್ಸೆಂಟ್ ಕಮಿಷನ್, ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತುವಿಕೆ ಕರ್ನಾಟಕ ರಾಜ್ಯವನ್ನು ಹಾಳು ಮಾಡಿದೆ. ಈ ವಿಚಾರ ಇಂದಿನ ದಿನ ಸಾಮಾನ್ಯ ಜನರಿಗೆ ಗೊತ್ತಾಗಿ ಬಿಜೆಪಿ ಪಕ್ಷವನ್ನು ಕಿತ್ತುಹಾಕಿ ಕಾಂಗ್ರೆಸ್ ಪಕ್ಷಕ್ಕೆ ಮಣೆ ಹಾಕಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು
“ಬಿಜೆಪಿ ಸರ್ಕಾರವಿದ್ದಾಗ ರೈತರಿಗೆ ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ವಿಚಾರದಲ್ಲಿ ಹಲವಾರು ಬಾರಿ ಡೆಲ್ಲಿಗೆ ಹೋಗಿ ಪ್ರತಿಭಟಿಸಿದ್ದೇವೆ. ಆದರೂ ಕೂಡ ಇನ್ನುವರೆಗೂ ರೈತರ ಸಂಕಷ್ಟಗಳು ಹಾಗೆ ಉಳಿದಿವೆ. ನಮ್ಮ ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿ ಅವರು ಕಳೆದ ಹತ್ತು ವರ್ಷಗಳಿಂದ ಚಳ್ಳಕೆರೆ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್, ಗ್ರಾಮಗಳಲ್ಲಿ ರಸ್ತೆ ಅಗಲೀಕರಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಕಟ್ಟಡ, ನಗರದ ಸ್ವಚ್ಛತೆ, ಸರ್ಕಾರಿ ಬಸ್ ಸ್ಟ್ಯಾಂಡ್, ವೇದಾವತಿ ನದಿಗೆ ಬ್ರಿಡ್ಜ್ ನಿರ್ಮಾಣ ಮಾಡಿ ರೈತರ ಕಷ್ಟವನ್ನು ದೂರ ಮಾಡಿದ್ದಾರೆ. ಶಾಸಕರು ಇಷ್ಟೊಂದೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅವರನ್ನು ಈ ಬಾರಿ ಮಂತ್ರಿಮಂಡಲದಲ್ಲಿ ಮಂತ್ರಿಯನ್ನಾಗಿ ಮಾಡಬೇಕು” ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.