ಹೊನ್ನಾಳಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯಾದ್ಯಂತ ಎಲ್ಲ ಪಕ್ಷಗಳು ಭಾರಿ ಪ್ರಚಾರದಲ್ಲಿವೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಬುಧವಾರ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಪರವಾಗಿ ಪ್ರಚಾರ ನಡೆಸಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂಸದರು ನಂತರ ದುರ್ಗಿಗುಡಿಯಲ್ಲಿ ಯೋಧನ ಪ್ರತಿಮೆಗೆ ಹಾಗೂ ಎಚ್.ಎಸ್. ರುದ್ರಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಶ್ರೀ ಮಠಕ್ಕೆ ಭೇಟಿ ಕೊಟ್ಟು ಡಾಕ್ಟರ್ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದರು. ನಂತರ ಕಾರ್ಯಕರ್ತರ ಜತೆಗೂಡಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿ ಮುಖಂಡರೊಂದಿಗೆ ಚರ್ಚೆ ನಡೆಸಿದರು. ರೇಣುಕಾಚಾರ್ಯರ ಗೆಲುವಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
“ನಮ್ಮ ಬಿಜೆಪಿ ಸರ್ಕಾರದಲ್ಲಿ ಶೇ. 70ರಷ್ಟು ಸೀಟನ್ನು 50 ವರ್ಷ ಒಳಗಿರುವವರಿಗೆ ನೀಡಲಾಗಿದೆ. ಪ್ರತಿಯೊಂದು ಸಮಾಜ, ಸಮುದಾಯಕ್ಕೂ ಟಿಕೆಟ್ ನೀಡಲಾಗಿದೆ. ನಿಷ್ಠಾವಂತ ಕಾರ್ಯಕರ್ತರು ಹಾಗೂ ಐಪಿಎಸ್ ಐಎಎಸ್ ಅಧಿಕಾರಿಗಳಿಗೂ ಸಹ ಟಿಕೆಟ್ ಕೊಡಲಾಗಿದ್ದು ಎಲ್ಲ ರೀತಿಯಲ್ಲೂ ಗೆಲುವಿಗೆ ಪಣತೊಡಲಾಗಿದೆ. ಕರ್ನಾಟಕದಲ್ಲಿ 155ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಹಾಗೆಯೇ ದಾವಣಗೆರೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಕುಣಿಯುತ್ತಿದೆ ಕುರುಡು ಕಾಂಚಾಣ; 265 ಕೋಟಿ ರೂ. ಮೌಲ್ಯದ ನಗದು, ಆಭರಣ ಜಪ್ತಿ
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ಪುರಸಭೆ ಸದಸ್ಯ ಹೊಸಕೇರಿ ಸುರೇಶ್, ಮಾಜಿ ಅಧ್ಯಕ್ಷ ಹೋಬಳದಾರ್ ಬಾಬು, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ, ಬಿಜೆಪಿ ಮುಖಂಡರಾದ ಬಿ.ಎಲ್. ಕುಮಾರಸ್ವಾಮಿ, ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸರಳಿನ ಮನೆ ಮಂಜಪ್ಪ ಸೇರಿ ಅನೇಕರು ಭಾಗವಹಿಸಿದ್ದರು.