Site icon Vistara News

Karnataka Election: ಬೇಲ್‌ ಮೇಲಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್: ಜೆ.ಪಿ. ನಡ್ಡಾ

ಹೊನ್ನಾಳಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜೆ.ಪಿ.ನಡ್ಡಾ

ಹೊನ್ನಾಳಿ: “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲಕ್ಷಾಂತರ ಕೋಟಿ ಭ್ರಷ್ಟಾಚಾರ ಮಾಡಿದೆ. ಈಗ ಆ ಪಕ್ಷದವರು ಬಿಜೆಪಿ ವಿರುದ್ಧ ಸುಳ್ಳು ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ.‌ ಆದರೆ, ಈ ಚುನಾವಣೆಯಲ್ಲಿ (Karnataka Election) ಗೆಲುವು ನಮ್ಮದೇ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಿಡಿಕಾರಿದರು.

ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹಾಗೆಯೇ ಕೇಂದ್ರದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಬೇಲ್ ಮೇಲೆ ಓಡಾಡುತ್ತಿದ್ದಾರೆ. ಬೇಲ್ ಇಲ್ಲದಿದ್ದರೆ ಇಷ್ಟೊತ್ತಿಗೆ ಜೈಲಿನಲ್ಲಿ ಇರುತ್ತಿದ್ದರು” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Karnataka Election: ವಿನಾಶದ ಅಂಚಿನಲ್ಲಿರುವ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಜನ ನಂಬಲ್ಲ: ಅರುಣ್‌ ಸಿಂಗ್

“ಆಯುಷ್ಮಾನ್ ಯೋಜನೆ ಮಾಡುವುದಕ್ಕೆ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸಿರಲಿಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲಿ ಅತಿ ವೇಗವಾಗಿ ಬಡವರಿಗೆ ಈ ಯೋಜನೆ ತಲುಪುತ್ತಿದೆ. 62 ಲಕ್ಷ ಜನರಿಗೆ ಈ ಕಾರ್ಡ್ ವಿತರಣೆಯಾಗಿದೆ. ಭಾರತ ಇದೀಗ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಈ ಮೊದಲು ಚೀನಾ ದೇಶದಿಂದ ಶೇಕಡಾ ಎರಡರಷ್ಟು ಮೊಬೈಲ್ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಶೇ.97 ರಷ್ಟು ಮೊಬೈಲ್‌ಗಳನ್ನು ಭಾರತವೇ ತಯಾರಿಸುತ್ತಿದೆ. ಕಾರುಗಳ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿದೆ” ಎಂದರು.

ಜೆ.ಪಿ.ನಡ್ಡಾ ಅವರಿಗೆ ಸನ್ಮಾನಿಸಿದ ಎಂ.ಪಿ.ರೇಣುಕಾಚಾರ್ಯ

“ವೀರಶೈವ ಲಿಂಗಾಯತರಿಗೆ ಎರಡರಷ್ಟು ಮೀಸಲಾತಿಯನ್ನು ಹೆಚ್ಚಿಸಿದ್ದು ನಾವು. ಆದರೆ, ಕಾಂಗ್ರೆಸ್‌ನವರು ಇದನ್ನು ಖಂಡಿಸಿ ನಾವು ಈ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಎಂ.ಪಿ. ರೇಣುಕಾಚಾರ್ಯ ಚೋಟ ಬಾಯ್ ಹಾಗೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿ ಹೆಚ್ಚಾಗುತ್ತದೆ. ರಾಜ್ಯದಲ್ಲೂ ಸಹ ನಮ್ಮ ಸರ್ಕಾರ ಬಂದರೆ ಅಭಿವೃದ್ಧಿ ಕೆಲಸಕ್ಕೆ ಇನ್ನೂ ವೇಗ ಸಿಗುತ್ತದೆ. ಹಾಗಾಗಿ ಎಂ.ಪಿ. ರೇಣುಕಾಚಾರ್ಯವನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು” ಎಂದು ನಡ್ಡಾ ಅವರು ಮನವಿ ಮಾಡಿಕೊಂಡರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, “ತಾಲೂಕಿನಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕೋವಿಡ್‌ನಲ್ಲಿ ಮಾಡಿದಂತ ನನ್ನ ಸೇವೆ ಗಮನಿಸಿ ಮತ್ತೊಮ್ಮೆ ನನಗೆ ಆಶೀರ್ವದಿಸಬೇಕು” ಎಂದು ಕೇಳಿಕೊಂಡರು.

ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, “ಹೊನ್ನಾಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಆದಷ್ಟೂ ಬೇರೆ ತಾಲೂಕುಗಳಲ್ಲಿ ಆಗಿಲ್ಲ. ನಿಮ್ಮ ಶಾಸಕರು ಅನುದಾನ ತರುವಲ್ಲಿ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಅಭಿವೃದ್ಧಿಯೇ ನನ್ನ ಕೆಲಸ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ಮತ ನೀಡಿ ತಾಲೂಕಿನಲ್ಲಿ ಅಭಿವೃದ್ಧಿಯನ್ನು ಕಾಣಬೇಕು. ಹಾಗಾಗಿ ಎಂ.ಪಿ.ರೇಣುಕಾಚಾರ್ಯ ಅವರ ಕೈಯನ್ನು ಬಲಪಡಿಸಬೇಕು” ಎಂದರು.

ಇದನ್ನೂ ಓದಿ: Karnataka Election: ರಾಹುಲ್‌ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ; ಮತ್ತೆ ನಾಲಿಗೆ ಹರಿಬಿಟ್ಟ ಯತ್ನಾಳ್‌

ಈ ಸಂದರ್ಭದಲ್ಲಿ ಎಮ್ಎಲ್‌ಸಿ ನವೀನ್, ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ತಾಲೂಕು ಬಿಜೆಪಿ ಅಧ್ಯಕ್ಷ ಜೆಕೆ ಸುರೇಶ್, ಪುರಸಭೆ ಅಧ್ಯಕ್ಷ ಸುಮ ಮಂಜುನಾಥ್, ಎ.ಬಿ.ಹನುಮಂತಪ್ಪ, ಶಾಂತರಾಜ್ ಪಟೇಲ್, ಜಿಲ್ಲಾ ಉಪಾಧ್ಯಕ್ಷರಾದ ನಲವನ್ನೇ ಮಂಜಣ್ಣ, ಕಾರ್ಯದರ್ಶಿ ನಾಗರಾಜ್ ಅರಕೆರೆ ಇನ್ನು ಮುಂತಾದವರು ಭಾಗವಹಿಸಿದ್ದರು.

Exit mobile version