ದಾವಣಗೆರೆ: ನಗರದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ (Davangere University) ಆಡಳಿತ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬ್ಯಾಂಕಿಂಗ್ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಪ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಅವರು, ಇಂತಹ ತರಬೇತಿ ಕೇವಲ ಎಂಬಿಎಗೆ ಸೀಮಿತಗೊಳಿಸದೆ, ಅಂತಿಮ ವರ್ಷದ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ನೀಡಬೇಕು. ಮುಂಬರುವ ದಿನಗಳಲ್ಲಿ ಇಂತಹ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ಆಡಳಿತ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಕೆ. ರಾಜು ಅವರು ಮಾತನಾಡಿ, ಈ ರೀತಿಯ ತರಬೇತಿಗೆ ವಿಶೇಷವಾಗಿ ಮಾನಸಿಕ ತಯಾರಿ ವಿದ್ಯಾರ್ಥಿಗಳಲ್ಲಿರಬೇಕು. ಕೇವಲ ಒಂದು ಒಂದೂವರೆ ಗಂಟೆಯ ಅವಧಿಯ ತರಬೇತಿಯಾಗಿರದೆ ಸತತ ಎಂಟು ಗಂಟೆಗಳ ಕಾಲ ತಮ್ಮನ್ನ ತಾವು ತೊಡಗಿಸಿಕೊಳ್ಳುವುದೆ ಒಂದು ವಿಶೇಷ ಅನುಭವ ಎಂದರು.
ಇದನ್ನೂ ಓದಿ | KPSC Recruitment 2023: ಗಮನಿಸಿ… 230 ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ! ಅಪ್ಲೈಗೆ ಸೆ.30 ಕೊನೆ ದಿನ
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಪ್ರೊ.ಆರ್ ಶಶಿಧರ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಇಂತಹ ವಿಶೇಷ ಮಾರ್ಗದರ್ಶಕರಿಂದ ಅನುಭವ ದೊರೆಯುತ್ತಿರುವುದು ನಿಮ್ಮ ಪಾಲಿಗೆ ಸುದೈವ ಎಂದರಲ್ಲದೆ ತರಬೇತಿಯ ಪೂರ್ಣ ಪ್ರಯೋಜನ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಕುಸಿತ
ವ್ಯಕ್ತಿತ್ವ ವಿಕಸನ ತರಬೇತಿದಾರ, ಅಂಕಣಕಾರ, ವೃತ್ತಿ ಮಾರ್ಗದರ್ಶಕ ಆರ್.ಕೆ. ಬಾಲಚಂದ್ರ ಮಾತನಾಡಿ, ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ಪರೀಕ್ಷೆಯ ಕುರಿತಾದ ಮಾಹಿತಿಯ ಕೊರತೆ, ಭಯ ಹಾಗೂ ಕೀಳರಿಮೆ ಕಾರಣವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಅನ್ನದ ಗೂಡಾಗಬೇಕು ಎಂದು ತಿಳಿಸಿದರು.
ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಠ ಪದವೀಧರರಾಗಿರಬೇಕು. ನಿಮ್ಮಲ್ಲಿ ಸ್ನಾತಕೋತ್ತರ ಪದವಿ ಓದಲು ಬಂದಾಗ ಎರಡು ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಹನ್ನೆರಡರಿಂದ ಹದಿನಾಲ್ಕು ಪರೀಕ್ಷೆಗಳನ್ನು ಎದುರಿಸುವ ಅವಕಾಶ ಲಭಿಸುವುದರಿಂದ ಕಾಲೇಜು ಮುಗಿಸುವ ಹಂತದಲ್ಲಿಯೆ ಬದುಕನ್ನು ಕಟ್ಟಿಕೊಳ್ಳಬಹುದು. ಕನ್ನಡ ಮಾತನಾಡುವ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | K-SET: 2023ರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷಾ ದಿನಾಂಕ ಪ್ರಕಟ, ಇಲ್ಲಿದೆ ಡಿಟೇಲ್
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದದ್ದ ಭಾರತೀಯ ಸ್ಟೇಟ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಪೃಥ್ವಿ ಸಿಂಗ್, ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿ ಸೇರಿ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳು ಬೋಧನಾ ಸಿಬ್ಬಂದಿ ಉಪಸ್ಥಿತರಿದ್ದರು.