ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಅವರು ಕಳೆದ ಎರಡು ದಿನ ಉಜ್ಜಯಿನಿ ಪ್ರವಾಸದಲ್ಲಿದ್ದರು (D K Shivakumar Ujjain Temple Visit) . ಮಧ್ಯಪ್ರದೇಶದಲ್ಲಿರುವ ಉಜ್ಜಯಿನಿ ಮಹಾಕಾಳೇಶ್ವರ ದೇವರ ದರ್ಶನ ಪಡೆದು, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಪ್ರದೇಶದಿಂದ ಇಂದು ಬೆಳಗ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದು, ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂದು ವಿಧಾನಸೌಧದ ಬಳಿ ಆಗಮಿಸಿದ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ನಾನು ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದ ಪಡೆದಿದ್ದೇನೆ. ರಾಜ್ಯದ ಮಹಿಳೆಯರಿಗೆ ಕೊಟ್ಟ ಭರವಸೆಯನ್ನು ಇಂದು ಈಡೇರಿಸುತ್ತಿದ್ದೇವೆ. ಟೀಕೆ ಮಾಡುವವರು ಮಾಡಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ಜನಪರ ಸರ್ಕಾರ’ ಎಂದು ಹೇಳಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಲಕ್ಷ್ಮೀ ಭೇಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಹಾಗೂ ಉಡುಪಿ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಇಂದು ಶ್ರೀಕೃಷ್ಣನ ಮಹಾಪೂಜೆ ಮಹಾಮಂಗಳಾರತಿ ವೇಳೆ ಪಾಲ್ಗೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ದೇವರಿಗೆ ನಮಿಸಿ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದಾರೆ. ಉಡುಪಿಯಿಂದ ಹೊರಡುವ ಮುನ್ನ ಅವರು ಅಲ್ಲಿನ ಕಾಂಗ್ರೆಸ್ ಕಚೇರಿಗೂ ತೆರಳಿದ್ದರು.