Site icon Vistara News

DK shivkumar: ‘ಶಕ್ತಿ’ ಉದ್ಘಾಟನೆಯಲ್ಲಿ ಗಮನ ಸೆಳೆದ ಡಿಕೆಶಿ ಪೇಟಾ-ಶಾಲು; ಏನಿದರ ಗುಟ್ಟು?

DCM Dk shivkumar Wear Special Peta during Shakti Yojana Inauguration Function

#image_title

ಬೆಂಗಳೂರು: ಕಾಂಗ್ರೆಸ್​ ಈ ಸಲ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿ (Congress Guarantee)ಗಳ ಭರವಸೆ ಕೊಟ್ಟಿತ್ತು. ಅದರಲ್ಲಿ ಮೊದಲ ಗ್ಯಾರಂಟಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದರು. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಎಂಬ ‘ಶಕ್ತಿ’ ಯೋಜನೆ ಇಂದಿನಿಂದ ಅನುಷ್ಠಾನಕ್ಕೆ ಬಂತು. ಈ ಯೋಜನೆ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ವಿಧಾನ ಸೌಧ ಎದುರು ದೊಡ್ಡಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK shivkumar), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಕಾಂಗ್ರೆಸ್​ನ ಹಲವು ಗಣ್ಯರು, ಸಚಿವರು, ಶಾಸಕರು ಉಪಸ್ಥಿತರಿದ್ದರು.

ಈ ಶಕ್ತಿ ಯೋಜನೆ ಉದ್ಘಾಟನೆಯ ಎಲ್ಲ ಕಾರ್ಯಕ್ರಮಗಳು, ಪ್ರಮುಖರ ಭಾಷಣಗಳ ಮಧ್ಯೆ ಅತಿ ಹೆಚ್ಚು ಗಮನಸೆಳೆದಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೇಷ-ಭೂಷಣ. ಅವರು ಇಂದು ಎಂದಿನಂತೆ ಬಿಳಿ ಪೈಜಾಮ, ನಿಲುವಂಗಿ ಧರಿಸುವ ಜತೆಗೆ ಒಂದು ಪೇಟಾ (ಟೊಪ್ಪಿ)ವನ್ನು ಹಾಕಿಕೊಂಡು ಬಂದಿದ್ದರು. ಹಾಗೇ, ತಿಳಿ ಹಳದಿ ಬಣ್ಣದ ವಿಶೇಷ ಶಾಲನ್ನು ಹೆಗಲ ಮೇಲೆ, ಕುತ್ತಿಗೆ ಬಳಸಿ ಹಾಕಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬರುವಾಗ ಈ ಪೇಟಾ ಧರಿಸಿ ಬಂದವರು ಇಡೀ ಕಾರ್ಯಕ್ರಮ ಮುಗಿಯುವವರೆಗೂ ಅದನ್ನು ತೆಗೆದಿಲ್ಲ. ಬಸ್​ನಲ್ಲಿ ಪ್ರಯಾಣ ಮಾಡುವಾಗಲೂ ತಲೆ ಮೇಲೆ ಹಾಗೇ ಇತ್ತು. ಹಳದಿ, ನೀಲಿ ಮತ್ತು ಆಕಾಶ ನೀಲಿ ಬಣ್ಣ ಮಿಶ್ರಿತ ಈ ಪೇಟಾ ಡಿಕೆಶಿ ತಲೆ ಮೇಲೆ ಕೂತು ಗಮನ ಸೆಳೆಯುತ್ತಿತ್ತು. ಇನ್ನು ಅವರು ಧರಿಸಿದ್ದ ಶಾಲಿನ ಮೇಲೆ ತ್ರಿಶೂಲದ ಚಿತ್ರ ಇದ್ದಿದ್ದು ಕೂಡ ಕುತೂಹಲ ಹುಟ್ಟಿಸಿದೆ. ಸಾಮಾನ್ಯವಾಗಿ ಡಿ.ಕೆ.ಶಿವಕುಮಾರ್​ ಹೀಗೆಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪೇಟಾವನ್ನು ಧರಿಸುವುದಿಲ್ಲ. ಆದರೆ ಇವತ್ಯಾಕೆ ಹೀಗೆ ಬಂದರು ಎಂಬುದೇ ಅನೇಕರ ಪ್ರಶ್ನೆ..

ಏನು ಈ ಪೇಟಾ ಗುಟ್ಟು?
ಡಿ.ಕೆ.ಶಿವಕುಮಾರ್ ಎರಡು ದಿನಗಳ ಉಜ್ಜಿಯಿನಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಸ್ಮಾರತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದೇವಸ್ಥಾನದ ವತಿಯಿಂದ ಡಿ.ಕೆ.ಶಿವಕುಮಾರ್​ಗೆ ಈ ಪೇಟಾ ತೊಡಿಸಿ, ಶಾಲು ಹಾಕಿದ್ದಾರೆ. ಮಹಾಕಾಳೇಶ್ವರ ದೇಗುಲದಲ್ಲಿ, ಗೌರವಾರ್ಥವಾಗಿ, ಆಶೀರ್ವಾದ ಪೂರ್ವಕವಾಗಿ ಕೊಟ್ಟ ಪೇಟಾ-ಶಾಲನ್ನು ಇಂದು ಡಿ.ಕೆ.ಶಿವಕುಮಾರ್ ಧರಿಸಿ ಬಂದಿದ್ದರು. ದೈವಭಕ್ತರಾಗಿರುವ ಡಿ.ಕೆ.ಶಿವಕುಮಾರ್​ ಪದೇಪದೆ ದೇಗುಲಗಳು, ಮಠಗಳಿಗೆ ಭೇಟಿ ಕೊಟ್ಟು ಪೂಜೆ ನಡೆಸುತ್ತಾರೆ. ಪ್ರಾರ್ಥಿಸುತ್ತಾರೆ. ಹಾಗೇ, ಉಪಮುಖ್ಯಮಂತ್ರಿಯಾದ ಬಳಿಕ ಅವರು ಮೊದಲ ಬಾರಿಗೆ ಉಜ್ಜಯನಿಗೆ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: D.K. Shivakumar: ಶ್ಲೋಕವನ್ನು ತಪ್ಪಾಗಿ ಅರ್ಥ ಮಾಡಿಕೊಂಡರೂ ಸರಿಯಾದ ಸಂದೇಶವನ್ನೇ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್‌!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದು, ಐದು ಗ್ಯಾರಂಟಿಗಳಲ್ಲಿ ಮೊದಲನೇಯದನ್ನು ಇಂದು ಅನುಷ್ಠಾನಕ್ಕೆ ತರುತ್ತಿದೆ. ಇದೊಂದು ಮಹತ್ವದ ಸಂದರ್ಭವಾಗಿರುವುದರಿಂದ ಆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ತಮಗೆ ನೀಡಲಾದ ಪೇಟಾವನ್ನು ಧರಿಸಿಬಂದಿದ್ದಾರೆ. ಹಾಗೇ, ಕಾರ್ಯಕ್ರಮದ ಜಾಗದಲ್ಲಿ ಕೂಡ ಮಾಧ್ಯಮದವರ ಜತೆ ಮಾತನಾಡುತ್ತ ಇದೇ ವಿಷಯವನ್ನು ಅವರು ಪ್ರಸ್ತಾಪಿಸಿದರು. ನಾನು ಎರಡು ದಿನ ಉಜ್ಜಯಿನಿ ಪ್ರವಾಸದಲ್ಲಿ ಇದ್ದೆ. ಮಹಾಕಾಳೇಶ್ವರನ ದರ್ಶನ ಪಡೆದಿದ್ದೇನೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇನ್ನು ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ ಡಿ.ಕೆ.ಶಿವಕುಮಾರ್​ ವಿಸ್ತಾರ ನ್ಯೂಸ್​ಗೆ ಪ್ರತಿಕ್ತಿಯೆ ನೀಡಿ, ಈ ಪೇಟ-ಶಾಲು ಬಗ್ಗೆ ಏನು ಹೇಳಿದರು..?- ದೇವರಿಗೆ ಲಂಚ ಕೊಡೋಕೆ ಆಗೋಲ್ವಲ್ಲ ಎಂದು ಡಿಕೆಶಿ ಹೇಳಿದ್ದೇಕೆ?- ಈ ಕೆಳಗಿನ ವಿಡಿಯೊ ನೋಡಿ.

Exit mobile version