ಬೆಂಗಳೂರು: ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿಯಾಗಿರುವ ನಿರ್ಮಲಾ ಸಿ. ಯಲಿಗಾರ್ʼ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಮತ್ತು ಅವರಿಗೆ ಪ್ರಕಟಿಸಲಾಗಿದ್ದ ಶ್ರೀಮತಿ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯ ಆಯ್ಕೆಯನ್ನು ಹಿಂಪಡೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಸಂಬದ್ಧವಾಗಿ ನಡೆದುಕೊಂಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಮೌನಾಚರಣೆಯ ಪ್ರತಿಭಟನೆ ದಾಖಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಹಿತ್ಯ ಪರಿಷತ್‌ನ ಮಾಧ್ಯಮ ಸಲಹೆಗಾರರಾದ ಶ್ರೀನಾಥ್ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಮಲಾ ಸಿ. ಯಲಿಗಾರ್ ಮೇಲಿನ ಆರೋಪವೇನು?
1. ಈ ವರ್ಷದ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ನಿರ್ಮಲಾ ಸಿ. ಯಲಿಗಾರ್ ಅವರು ತಮ್ಮ 31 ಸಿಬ್ಬಂದಿಗಳಿಗೆ ವಸತಿ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ 65/35 ಕೆವಿಎ ಡಿಸೇಲ್ ಜನರೇಟರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಿಲ್ಲ, ಎಂಬ ಕಾರಣಕ್ಕಾಗಿ ಜನವರಿ 6ರಂದು ಮಾಧ್ಯಮಗಳ ಎದುರು ಹಾಗೂ ಜನಸಾಮಾನ್ಯರ ಎದುರು ಅಸಂಬದ್ಧವಾಗಿ ಮಾತನಾಡಿದ್ದರು.
2. ನಿರ್ಮಲಾ ಸಿ. ಯಲಿಗಾರ್ ಅವರು ಜನವರಿ 8ರಂದು ದೂರದರ್ಶನ ಕೇಂದ್ರದಲ್ಲಿ ಸಾಹಿತ್ಯ ಪರಿಷತ್ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದಾರೆ. ಮತ್ತು ಇದನ್ನು ಸಾಮಾಜಿಕ ಜಾಲ ತಾಣದಲ್ಲೂ ಪ್ರಕಟಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪವೇನು?
1. ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಮಾಡಿದ ಅಪಮಾನ.
2. ಈ ರೀತಿ ಮೌನಾಚರಣೆ ಮಾಡುವುದು ಯಾರಾದರು ಮೃತ ಹೊಂದಿದ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ಮೃತ ಹೊಂದುವ ಸಂಸ್ಥೆಯಲ್ಲ. ಸೂರ್ಯ ಚಂದ್ರರಿರುವವರೆಗೂ ಹಾಗೂ ಕನ್ನಡಿಗರು ಈ ಭೂಮಿಯಲ್ಲಿ ಇರುವವರೆಗೂ ಪರಿಷತ್ತು ಜೀವಂತವಾಗಿರುವ ಸಂಸ್ಥೆ.
3. ನಿರ್ಮಲಾ ಯಲಿಗಾರ್ ಅವರಿಗೆ ಫೆಬ್ರವರಿ 7ರಂದು ನೀಡಿದ್ದ ಕಾನೂನು ತಿಳುವಳಿಕೆ ಪತ್ರಕ್ಕೆ 15 ದಿನದಲ್ಲು ವಿವರಣೆ ಕೋರಿದ್ದರೂ ಅದನ್ನು ನೀಡಿಲ್ಲ. ಹೀಗಾಗಿ ಅವರನ್ನು ಸದಸ್ಯತ್ವದಿಂದ ವಜಾ ಮಾಡಲಾಗಿದೆ.
ಪಂಕಶ್ರೀ ಸಾಹಿತ್ಯ ಪ್ರಶಸ್ತಿ ವಾಪಸ್
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 6ರಂದು ಪರಿಷತ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಮಲಾ ಸಿ. ಯಲಿಗಾರ್ ಅವರಿಗೆ ನೀಡಿದ ʻಶ್ರೀಮತಿ ಪಂಕಜಶ್ರೀ ಸಾಹಿತ್ಯ ಪ್ರಶಸ್ತಿʼ ಆಯ್ಕೆಯನ್ನು ಹಿಂಪಡೆಯಲು ನಿರ್ಧರಿಸಲಾಯಿತು.
ಇದನ್ನೂ ಓದಿ : BKS Varma Death | ಬಿ.ಕೆ.ಎಸ್. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು