ಲಿಂಗಸುಗೂರು: ಪಂಚಮಸಾಲಿ (Panchamasali) ಸಮಾಜಕ್ಕೆ 2ಎ ಮೀಸಲಾತಿ (2A Reservation) ನೀಡುವ ಬಗ್ಗೆ ಒಂದು ವಾರದೊಳಗೆ ನಿರ್ಧಾರ ಪ್ರಕಟಿಸುವುದಾಗಿ ಸಿಎಂ (CM) ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಕಾಲಾವಕಾಶ ಮುಗಿದಿದೆ. ಆದರೂ ಸಂಕ್ರಾಂತಿವರೆಗೆ ಕಾಯುತ್ತೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಸಮಾಜದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರ ಸಭೆ ಕರೆದು ಮೀಸಲಾತಿ ನೀಡುವ ವಿಚಾರದಲ್ಲಿ ಕಾನೂನು ತಜ್ಞರ ಜತೆಗೆ ಚರ್ಚಿಸಿ ಒಂದು ವಾರದಲ್ಲಿ ನಿಲುವು ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆಯಂತೆ ವಾರ ಕಾಲಾವಕಾಶ ಮುಗಿದಿದೆ. ಆದರೂ ಸಂಕ್ರಾಂತಿವರೆಗೆ ಗಡುವು ನೀಡುತ್ತೇವೆ, ಅದರೊಳಗಾಗಿ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಡಿ.24ರಂದು ಯರಡೋಣಾದಲ್ಲಿ ಹೋರಾಟ ಪ್ರಾರಂಭ
ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ನಿರಂತರವಾಗಿರಿಸಲು ಡಿ.24ರಂದು ಅಮರೇಶ್ವರ ಜನ್ಮಭೂಮಿ ಯರಡೋಣಾದಲ್ಲಿ ರಾಜ್ಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟ ಪ್ರಾರಂಭಿಸಲಾಗುವುದು. ನಂತರ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತ ಉದ್ಘಾಟನೆ ಹಾಗೂ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆ ಸಮಾರಂಭದಲ್ಲಿ ಸಮಾಜದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ತಾವರಗೇರಾ, ಶಂಕರಗೌಡ ಅಮರಾವತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.