Site icon Vistara News

ಬೆಂಗಳೂರಲ್ಲಿ ಹೆಚ್ಚುತ್ತಿವೆ ರಸ್ತೆಗುಂಡಿಗಳು; ಬಲಿ ಪಡೆಯಲು ಸಿದ್ಧವೆಂಬಂತೆ ಬಾಯ್ತೆರೆದು ನಿಂತ ಈ ಹೊಂಡ ನೋಡಿ!

Deadly potholes in the roads of Govindraj Nagar At Bengaluru

#image_title

ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಗೆ (Potholes in Bengaluru) ಬರವಿಲ್ಲ. ಮಾರು ದೂರಕ್ಕೊಂದು ಗುಂಡಿ ಸಿಕ್ಕೇ ಸಿಗುತ್ತದೆ. ಬೆಳಗ್ಗೆ ಹೋಗುವಾಗ ಸರಿಯಿದ್ದ ರಸ್ತೆಯಲ್ಲಿ, ನಾವು ರಾತ್ರಿ ಬರುವಷ್ಟರಲ್ಲಿ ಗುಂಡಿ ಬಿದ್ದಿರುತ್ತದೆ. ಇಲ್ಲಿನ ಜನರ ಆಕ್ರೋಶವನ್ನು ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗುಂಡಿಯ ಕಾರಣಕ್ಕೆ ಆಗಿರುವ ಅವಘಡಗಳಿಂದ ಹಲವರು ಪ್ರಾಣ ತೆತ್ತಿದ್ದಾರೆ, ಅನೇಕಾನೇಕರಿಗೆ ಗಂಭೀರ ಗಾಯಗಳಾಗಿವೆ. ಅಷ್ಟಾದರೂ ಕೈಯಲ್ಲಿ ಅಧಿಕಾರ ಇರುವವರು, ಇಲ್ಲಿನ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಿಲ್ಲ.

ಇದೀಗ ಬೆಂಗಳೂರಿನ ಗೋವಿಂದರಾಜನಗರದಲ್ಲಿ ರಸ್ತೆ ಮಧ್ಯ ಭಾಗದಲ್ಲಿ ದೊಡ್ಡ ಹೊಂಡವಾಗಿದೆ. ಭೂಕಂಪವಾದ ಸಂದರ್ಭದಲ್ಲಿ ಭೂಮಿ ಬಿರುಕು ಬಿಡುತ್ತದಲ್ಲ, ಥೇಟ್ ಅದೇ ಮಾದರಿಯಲ್ಲೇ, ಅಗಲವಾದ ಗುಂಡಿಬಿದ್ದಿದೆ. ಕಲ್ಲುಗಳು ಎದ್ದಿವೆ. ಸದ್ಯ ಆ ಹೊಂಡದಲ್ಲಿ ಒಂದು ಮರದ ಚಿಕ್ಕ ರೆಂಬೆಯನ್ನು ಹಾಕಿಡಲಾಗಿದೆ. ಹಗಲಲ್ಲಿ ಬೆಳಕಿದ್ದಾಗ ಈ ಗುಂಡಿ ಕಣ್ಣಿಗೆ ಕಾಣಬಹುದು. ಆದರೆ ರಾತ್ರಿ ಹೊತ್ತಲ್ಲಿ ವಾಹನ ಸವಾರರಿಗೆ ಹೊಂಡ ಕಾಣಿಸದೆ ಅಪಾಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಅಗಲವಾದ ಗುಂಡಿ

ಗೋವಿಂದರಾಜನಗರ 3ನೇ ಮುಖ್ಯರಸ್ತೆ ಹೀಗೆ ಗುಂಡಿ ಬಿದ್ದಿದೆ. ಸುಮಾರು 5 ಅಡಿ ಉದ್ದ, 3 ಅಡಿ ಅಗಲಕ್ಕೆ ಕುಸಿದಿದೆ. ಆ ಹೊಂಡದಿಂದ 100 ಮೀಟರ್​ ದೂರದಲ್ಲಿ ಮತ್ತೊಂದು ಗುಂಡಿಯಿದೆ. ಈ ಗುಂಡಿಗಳು ಉಂಟಾಗಿ 15ದಿನವೇ ಕಳೆದಿದ್ದರೂ ಬಿಬಿಎಂಪಿ ಇದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಗುಂಡಿಯ ಆಳ-ಅಗಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚುನಾವಣೆಗೂ ಪೂರ್ವದಲ್ಲಿ ಈ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದರೆ ಈಗಲೇ ಕಿತ್ತು ಬರುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಡುತ್ತವೆ. ಇದು ಮುಖ್ಯ ರಸ್ತೆಯಾಗಿದ್ದರೂ ಬಿಬಿಎಂಪಿ ಗುಂಡಿ ತುಂಬುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಬೀದಿಗೆ ಬಿದ್ದ ಗದ್ದೆ ರಂಗನಾಥ; ದೇಗುಲ ಕೆಡವಿ ದೇವರನ್ನೇ ಬಯಲಿಗೆ ತಂದ ಅಧಿಕಾರಿಗಳು!

ಬಾಗಲಕೋಟೆಯಲ್ಲಿ ಮಳೆ ಅವಾಂತರ
ಇನ್ನು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಎಂಬಲ್ಲಿ ಧಾರಾಕಾರ ಮಳೆ ಸುರಿದು, ಮನೆಗಳ ಮೇಲೆಲ್ಲ ಮರಗಳು ಬಿದ್ದಿವೆ. ಮನೆಗಳಿಗೆ ಶೆಡ್​ ರೂಪದಲ್ಲಿ ಹಾಕಲಾಗಿದ್ದ ತಗಡುಗಳು ಗಾಳಿಗೆ ಹಾರಿಹೋಗಿವೆ. ಸುಮಾರು 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಐವರು ಗಾಯಗೊಂಡಿದ್ದಾರೆ. ಮನೆಗಳ ಸಮೀಪ ಇರುವ ಮರಗಳ ರೆಂಬೆ-ಕೊಂಬೆಯನ್ನು ಕಡಿಯದ ಬಗ್ಗೆ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮರಗಳನ್ನು ಕತ್ತರಿಸಿ ಎಂದು ಮೊದಲೇ ಹೇಳಿದ್ದೆವು. ಆದರೆ ಕೇಳಲಿಲ್ಲ. ಈಗ ನಮ್ಮ ಮನೆಯೇ ಹಾಳಾಗಿದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ.

Exit mobile version