ಗಂಗಾವತಿ: ರಾಜವಂಶಸ್ಥ, ಮಾಜಿ ಸಚಿವ (Former Minister) ಶ್ರೀರಂಗದೇವರಾಯಲು ಅವರ ಅಂತ್ಯಕ್ರಿಯೆ (funeral) ಬುಧವಾರ ಸಂಜೆ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ (Anegondi) ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಮಂಗಳವಾರ ಅಸ್ತಂಗತರಾಗಿದ್ದ ಅಜಾತ ಶತ್ರು, ರಾಜಕೀಯ ಮುತ್ಸದ್ಧಿ ಶ್ರೀರಂಗದೇವರಾಯಲು ಅವರ ಅಂತ್ಯ ಸಂಸ್ಕಾರ ಬುಧವಾರ ಅವರ ಸ್ವಗ್ರಾಮ ತಾಲೂಕಿನ ಆನೆಗುಂದಿ ಗ್ರಾಮದ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಗಂಗಾವತಿ ತಹಸೀಲ್ದಾರ್ ಮಂಜುನಾಥ್ ಭೋಗಾವತಿ ನೇತೃತ್ವದಲ್ಲಿ, ರಾಯಲು ಅವರ ಹಿರಿಯ ಪುತ್ರ ಕೃಷ್ಣದೇವರಾಯ ಅವರು ತಾಲೂಕು ಆಡಳಿತ ನೀಡಿದ್ದ ರಾಷ್ಟ್ರಧ್ವಜವನ್ನು ರಾಯಲು ಅವರ ಪಾರ್ಥೀವ ಶರೀರದ ಮೇಲೆ ಹೊದಿಸಿ ಗೌರವ ಸಲ್ಲಿಸಲಾಯಿತು.
ಪೊಲೀಸ್ ಇಲಾಖೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಮರ್ಪಿಸಿದರು. ಬಳಿಕ ರಾಯಲು ಅವರ ಹಿರಿಯ ಪುತ್ರ ತಮ್ಮ ತಂದೆಯ ಚಿತೆಗೆ ಕ್ಷತ್ರೀಯ ವಿಧಿ-ವಿಧಾನಗಳಂತೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮೊದಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶ್ರೀರಂಗದೇವರಾಯಲು ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ರಾಜಕೀಯ ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
ಜಿಲ್ಲಾಧಿಕಾರಿ ನಲೀನ್ ಅತುಲ್, ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡೆ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಸೇರಿದಂತೆ ಸರ್ಕಾರದ ನಾನಾ ಇಲಾಖೆಯ ಅಧಿಕಾರಿಗಳು ಅಂತ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಮೆರವಣಿಗೆ
ಬುಧವಾರ ಗಂಗಾವತಿಯ ನಿವಾಸದಿಂದ ರಾಯಲು ಅವರ ಪಾರ್ಥೀವ ಶರೀರವನ್ನು ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಗ್ರಾಮ ಆನೆಗುಂದಿಯಲ್ಲಿರುವ ಸ್ವಗೃಹಕ್ಕೆ ತರಲಾಯಿತು. ಸಂಜೆ 4 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಇಲ್ಲಿಯ ನಿವಾಸದಿಂದ ಮೆರವಣಿಗೆ ಮೂಲಕ ಅವರ ತೋಟಕ್ಕೆ ತರಲಾಯಿತು. ಬಳಕ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.