ಉಳ್ಳಾಲ: ನೇತ್ರಾವತಿ ನದಿಯಲ್ಲಿ ಪಂಜರ ಕೃಷಿ ಪದ್ಧತಿ ಮೂಲಕ ಸಾಕುತ್ತಿದ್ದ ಮೀನುಗಳು ಸಾಮೂಹಿಕವಾಗಿ ಸತ್ತಿರುವ (Death of Fish) ಘಟನೆ ಉಳ್ಳಾಲದಲ್ಲಿ ನಡೆದಿದೆ. ಕಾರ್ಖಾನೆಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯವು ನದಿ ನೀರಿನಲ್ಲಿ ಸೇರಿ ಮಲಿನಗೊಂಡ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿರುವ ಶಂಕೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.
ಉಳ್ಳಾಲದ ಬ್ಲೇರಾ ಡಿಸೋಜಾ ಎಂಬುವವರಿಗೆ ಸೇರಿದ 3.5 ಲಕ್ಷ ರೂ. ಬೆಲೆಬಾಳುವ ಈ ಮೀನುಗಳು ಸತ್ತಿರುವುದರಿಂದ ಭಾರಿ ನಷ್ಟ ಉಂಟಾಗಿದೆ. ಬ್ಲೇರಾ ಅವರು ಬ್ಯಾಂಕ್ ನಿಂದ ಮುದ್ರಾ ಸಾಲ ಪಡೆದು ಮೀನಿನ ಕೃಷಿ ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ವೃತ್ತಿಯನ್ನು ಆರಂಭಿಸಿದ ಬ್ಲೇರಾ ಅವರಿಗೆ ಇದೀಗ ಎರಡನೇ ಬಾರಿಗೆ ಮೀನಿನ ಕೃಷಿ ಸಂಪೂರ್ಣ ನಷ್ಟವನ್ನು ಉಂಟು ಮಾಡಿದೆ.
2022 ರ ನವೆಂಬರ್ ತಿಂಗಳಲ್ಲಿ ಈ ಪಂಜರ ಕೃಷಿಯ ಮರಿಗಳನ್ನು ಹಾಕಲಾಗಿತ್ತು. ಪ್ಯಾಂಪೆನೋ ತಳಿಯ 4,500 ಮರಿಗಳು ಬೃಹತ್ ಗಾತ್ರದಲ್ಲಿ ಬೆಳೆದಿತ್ತು. ಒಂದೂವರೆ ವರ್ಷದಿಂದ ಮೀನು ಯಾವುದೇ ತೊಂದರೆಯಿಲ್ಲದೆ ಇತ್ತು. ಫೆ.11 ರಂದು ಬೆಳಗ್ಗೆ ಬ್ಲೇರಾ ಅವರು ನದಿ ಬದಿಗೆ ತೆರಳಿದಾಗ 22 ಮೀನುಗಳು ಮೃತಪಟ್ಟಿದ್ದವು. ಪಂಜರದಲ್ಲಿದ್ದಂತಹ ಎಲ್ಲಾ ಮೀನುಗಳು ಸೋಮವಾರ (ಫೆ.೧೩) ಮೃತಪಟ್ಟು ನದಿ ನೀರಿನಲ್ಲಿ ತೇಲುತ್ತಿತ್ತು. ಜೊತೆಗೆ ಪಚಿಲೆ ಕೂಡ ಬಾಯ್ತೆರೆದಿದೆ. ಕಾರ್ಖಾನೆಯಿಂದ ಹೊರಬಿಡುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರಿನಿಂದ ಘಟನೆ ಸಂಭವಿಸಿರುವ ಶಂಕೆ ಇದ್ದು, ಎಕ್ಕೂರು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಜ್ಞಾನಿ ಹಾಗೂ ಮೀನುಗಾರಿಕಾ ಇಲಾಖೆಯವರು ಭೇಟಿ ನೀಡಿ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ: Aero India 2023 : ಎಚ್‌ಎಎಲ್‌ನ ತೇಜಸ್ ಯುದ್ಧ ವಿಮಾನ ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಸಜ್ಜು