ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ (Tungabhadra Reservoir) ಪ್ರಸ್ತುತ 88 ಟಿಎಂಸಿ (TMC) ನೀರಿನ ಸಂಗ್ರಹ ಇದ್ದು, ಎಡದಂಡೆ ಮುಖ್ಯಕಾಲುವೆಗೆ 4100 ಕ್ಯೂಸೆಕ್‌ನಂತೆ ನ.30ರವರೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 119ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ, ನ 30 ರವರೆಗೆ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1300 ಕ್ಯೂಸೆಕ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 850 ಕ್ಯೂಸೆಕ್ , ರಾಯ ಬಸವಣ್ಣ ಕಾಲುವೆಗೆ 270 ಕ್ಯೂಸೆಕ್ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನ.30 ರವರೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಶ್ವಕಪ್‌ಗೆ ಸಂಭಾವ್ಯ ತಂಡ ಪ್ರಕಟಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಕೊಕ್
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಇರುವ 88 ಟಿಎಂಸಿ ನೀರಿನ ಪೈಕಿ ರಾಜ್ಯದ ಪಾಲಿಗೆ 65 ಟಿಎಂಸಿ ಇದೆ. ಈಗಾಗಲೇ 10 ಟಿಎಂಸಿ ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ನೀರು ಹರಿಸಲಾಗಿದೆ. ಒಳ ಹರಿವಿನ ಆಧಾರದ ಮೇರೆಗೆ ಪ್ರಸ್ತುತ ಕಾಲುವೆಗೆ ಈ ಮೇಲಿನ ಪ್ರಮಾಣದ ನೀರು ಹರಿಸಲು ನಿರ್ಧರಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎರಡು ಬೆಳೆಗೂ ನೀರು ಬಿಡಬೇಕು ಎಂಬುದು ನಮ್ಮ ಆಶಯ ಕೂಡ. ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ಅಕ್ಟೋಬರ್‌ನಲ್ಲಿ ನಿರ್ಧಾರ ಮಾಡಲಾಗುವುದು. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದಿದ್ದು, ರೈತರು ಹಲವು ಬೇಡಿಕೆಗಳನ್ನು ಸಭೆಯ ಮುಂದೆ ಇಟ್ಟಿದ್ದಾರೆ. ನಾಲ್ಕು ಜಿಲ್ಲೆಯ ಸಚಿವರು ಸಭೆ ನಡೆಸುವ ಬಗ್ಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಅನಧಿಕೃತವಾಗಿ ನೀರು ಬಳಕೆ ತಡೆ ಸಂಬಂಧ ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: Darren Kent: ʻಗೇಮ್ ಆಫ್ ಥ್ರೋನ್ಸ್ʼ ಖ್ಯಾತಿಯ ಡ್ಯಾರೆನ್ ಕೆಂಟ್ ಇನ್ನಿಲ್ಲ!
ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜ್, ಬಿ.ನಾಗೇಂದ್ರ, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಅಮರೇಶ ನಾಯಕ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಜಿ.ಜನಾರ್ದನ್ ರೆಡ್ಡಿ, ಬಸವನಗೌಡ ತುರುವಿಹಾಳ್, ಎಸ್.ಶಿವರಾಜ್ ಪಾಟೀಲ್, ಬಿ.ಎಂ.ನಾಗರಾಜ್, ಶರಣೇಗೌಡ ಬಯ್ಯಾಪುರ, ರೈತ ಮುಖಂಡ ಚಾಮರಾಸ ಪಾಟೀಲ್, ಹಾಗೂ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಬಿಜೆಪಿ, ಜೆಡಿಎಸ್‌ಗೆ ಇನ್ನು ಭವಿಷ್ಯ ಇಲ್ಲ
ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಭವಿಷ್ಯ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಪಕ್ಷಗಳಲ್ಲಿ ಯಾವೊಬ್ಬ ಶಾಸಕರು ಇರುವುದಿಲ್ಲ ಎಂದರು.
ಇದನ್ನೂ ಓದಿ: Viral News : ಸ್ಮಾರ್ಟ್ ಬೆಂಗಳೂರಿನಲ್ಲಿ ಆಟೊ ಚಾಲಕರೂ ಸ್ಮಾರ್ಟ್! ವಾಚ್‌ನಲ್ಲಿ ಕ್ಯೂಆರ್ ಕೋಡ್!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆಗೊಳಗಾಗಿದ್ದು, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹೇಳಿದರು.