Site icon Vistara News

PES University : ಜಸ್ಟಿಸ್‌ ಫಾರ್ ಆದಿತ್ಯಪ್ರಭು; PES ವಿರುದ್ಧ ಸಿಡಿದೆದ್ದ ಪೋಷಕರು

justice for Adityaprabhu protest against PES Collage in freedom park

ಬೆಂಗಳೂರು: ಇಲ್ಲಿನ ಗಿರಿನಗರ ಬಳಿಯ ಪಿಇಎಸ್‌ ಕಾಲೇಜಿನ (PES College) ವಿದ್ಯಾರ್ಥಿ ಆದಿತ್ಯ ಪ್ರಭು (19) ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಲ್ಲಲಾದ ಪ್ರಕರಣ ಈಗ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ಇದೆ ಎಂದು ಮೃತ ತಾಯಿ ಸೋಷಿಯಲ್‌ ಮೀಡಿಯಾದಲ್ಲಿ ಜಸ್ಟಿಸ್ ಫಾರ್ ಆದಿತ್ಯಪ್ರಭು (Justice For Adithya Prabhu) ಎಂಬ ಹೆಸರಿನಲ್ಲಿ ಖಾತೆ ತೆರೆದು ಅಭಿಯಾನವನ್ನು ಪ್ರಾರಂಭಿಸಿದ್ದರು. ಈಗ ಫ್ರೀಡಂ ಪಾರ್ಕ್‌ನಲ್ಲಿ ಮೃತ ಆದಿತ್ಯ ಕುಟುಂಬಸ್ಥರು ಹಾಗೂ ಕೆಲ ಸಂಘಟನೆಗಳಿಂದ ಪ್ರತಿಭಟನೆ ಶುರುವಾಗಿದ್ದು, ಪಿಇಎಸ್‌ ವಿವಿ (PES University) ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.

ಕಾಲೇಜು ಮಹಡಿ ಮೇಲಿಂದ ಬಿದ್ದು ಆದಿತ್ಯ ಪ್ರಭು (19) ಮೃತಪಟ್ಟಿದ್ದ. ಇದು ಆತ್ಮಹತ್ಯೆ ಎಂದು ಪಿಇಎಸ್ ಕಾಲೇಜು ಆಡಳಿತ ಮಂಡಳಿ ಹೇಳಿತ್ತು. ಅದರನ್ವಯ ದೂರು ದಾಖಲಾಗಿತ್ತು. ಆದರೆ, ಈಗ ಈ ಸಾವಿನ ಬಗ್ಗೆ ಮೃತ ಆದಿತ್ಯ ಪ್ರಭುವಿನ ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಅಭಿಯಾನವನ್ನು ಆರಂಭ ಮಾಡಿದ್ದರು. ಬಳಿಕ ಭಾನುವಾರದಿಂದ (ಜುಲೈ 23) ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳ ಜತೆಗೂಡಿ ಧರಣಿ ಕುಳಿತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದಿತ್ಯ ಪ್ರಭು ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಆರೋಪವನ್ನು ಮಾಡಲಾಗಿದೆ.

ತಾಯಿಯ ಜತೆ ಆದಿತ್ಯಪ್ರಭು

ಜಸ್ಟಿಸ್ ಫಾರ್ ಆದಿತ್ಯ ಎಂಬ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದ್ದು, ಪಿಇಎಸ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಆದಿತ್ಯನ ಸ್ನೇಹಿತರು, ಕುಟುಂಬಸ್ಥರು ಹಾಗೂ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: NICE Road : ʼನೈಸ್ʼ ಕರ್ಮಕಥೆ ಪಾರಾಯಣ ಮಾಡಿ; ಸಿಎಂ ಸಿದ್ದರಾಮಯ್ಯ ಏಟಿಗೆ ಎಚ್‌ಡಿಕೆ ಎದಿರೇಟು!

ನನ್ನ ಮಗನಿಗೆ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ. ಆತ ಬಹಳ ಬುದ್ಧಿವಂತ ಇದ್ದ. ಜತೆಗೆ ಅವನು ಸಾಯುವ ದಿನ ಬಹಳ ಉತ್ಸುಕತೆಯಿಂದ ತೆರಳಿದ್ದ. ಇನ್ನೇನು ರಜೆ ಸಿಗಲಿದೆ ಎಂಬ ಖುಷಿಯಲ್ಲಿಯೂ ಇದ್ದ. ಅವನು ಯಾವತ್ತೂ ಧೈರ್ಯಗೆಡುತ್ತಿರಲಿಲ್ಲ. ಜತೆಗೆ ಅವನು ಎಂದೂ ಡಿಪ್ರೆಶನ್‌ಗೆ ಹೋಗಿರಲಿಲ್ಲ. ಈಗ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಆದಿತ್ಯಪ್ರಭು ತಾಯಿ ಆಗ್ರಹಿಸಿದ್ದಾರೆ.

ಪೋಷಕರ ಆರೋಪ ಏನು?

ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು, ಸಿಬ್ಬಂದಿ, ಕಾಲೇಜು ಆಡಳಿತ ಮಂಡಳಿಯವರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ಇದೇ ವೇಳೆ ಆದಿತ್ಯಪ್ರಭು ತಾಯಿ ಸಹ ಕಿಡಿಕಾರಿದ್ದು, ತಮ್ಮ ಮಗನ ಸಾವಿಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಲ್ಲದೆ, ಕಾಲೇಜು ಆಡಳಿತ ಮಂಡಳಿಯವರ ಅಂದಿನ ಹೇಳಿಕೆ ಗೊಂದಲವನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದ್ದಾರೆ.

ತಾಯಿಯ ಆರೋಪ ಹೀಗಿದೆ

ಜುಲೈ 17ರಂದು ಬೆಳಗ್ಗೆ 11.45ಕ್ಕೆ ನನ್ನ ಮಗ ಆದಿತ್ಯ ನನಗೆ ಕಾಲ್‌ ಮಾಡಿ, ಪಿಇಎಸ್ ಕಾಲೇಜಿನವರು ನನಗೆ ಹಿಂಸೆ ನೀಡಿದ್ದು, ನಕಲು ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ನಾನು ಕಾಪಿ ಮಾಡಿಲ್ಲ. ಕೊಠಡಿ ಒಳಗೆ ಹೋದಾಗ ಫೋನ್‌ ನನ್ನ ಜೇಬಿನಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಅದನ್ನು ಏರೋಪ್ಲೇನ್‌ ಮೋಡ್‌ಗೆ ಹಾಕಿ ಬೆಂಚ್‌ ಪಕ್ಕದಲ್ಲಿಟ್ಟಿದೆ. ಆದರೆ, ಪರೀಕ್ಷೆ ಮುಗಿಯುವ ಹೊತ್ತಿಗೆ ಮೇಲ್ವಿಚಾರಕರು ಅದನ್ನು ನೋಡಿ ನಾನು ಕಾಪಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಅಮ್ಮ ಎಂದು ಹೇಳಿದ್ದನೆಂದು ಆದಿತ್ಯಪ್ರಭು ತಾಯಿ ಹೇಳಿದ್ದಾರೆ.

ಆದಿತ್ಯಪ್ರಭು ಸಾವಿಗೆ ನ್ಯಾಯ ದೊರಕಿಸಿ ಕೊಡವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಅಲ್ಲದೆ, ಬಳಿಕ ಕಾಲೇಜಿನ ಮಾರ್ಗದರ್ಶಕರು ಎಂದು ಹೇಳಿಕೊಂಡು ಒಬ್ಬರು ನನಗೆ ಕರೆ ಮಾಡಿದ್ದರು. ಜತೆಗೆ ಕಾಲೇಜಿಗೆ ಬನ್ನಿ ಎಂದು ಹೇಳಿದ್ದರು. ಅದರಂತೆ ನಾನು ಅಲ್ಲಿಗೆ ಹೋದಾಗ ಆಡಳಿತ ಮಂಡಳಿ ಸದಸ್ಯರಾಗಲೀ, ಸಿಬ್ಬಂದಿಯಾಗಲೀ ಇರಲಿಲ್ಲ. ಮುಖ್ಯಸ್ಥರು ಕೂಡಾ ಕಾಣಲಿಲ್ಲ. ಅಲ್ಲಿಯೇ ಸುಮಾರು ಒಂದು ಗಂಟೆ ಕಾಲ ಕಾದಿದ್ದೆ, ಆಮೇಲೆ ಕಾಲೇಜಿನ ಮೆಂಟರ್ ಹಾಗೂ ಸಿಒಇ ಬಂದು ನನ್ನನ್ನು ಸ್ಟಾಫ್ ರೂಂಗೆ ಕರೆಸಿಕೊಂಡಿದ್ದಾರೆ. ಅಲ್ಲಿ ನನ್ನ ಮಗ ಇರಲಿಲ್ಲ. ಕೇಳಿದಾಗ, ವಿದ್ಯಾರ್ಥಿಗಳ ಜತೆ ಹೊರಗಡೆ ತೆರಳಿದ್ದಾನೆ ಎಂದಿದ್ದರು. ನನ್ನ ಮಗ ಹಾಗೆ ಸುಮ್ಮನೆ ಸುತ್ತಾಡುವವನಲ್ಲ. ಸಿಸಿಟಿವಿ ಪರಿಶೀಲಿಸಿ ನೋಡಿ ಎಂದು ಹೇಳಿದ್ದೆ. ಕೆಲವೇ ಸಮಯದಲ್ಲಿ ಮೆಂಟರ್ ಹಾಗೂ ಸಿಒಇಗೆ ಕರೆ ಬಂತು, ಅವರು ಗಾಬರಿಯಿಂದ ಹೊರಗೆ ಓಡಿದರು. ನಾನೂ ಓಡಿ ಹೋಗಿ ನೋಡಿದಾಗ ನನ್ನ ಮಗ ಮಹಡಿಯಿಂದ ಕೆಳಗೆ ಬಿದ್ದಿರುವುದು ಗೊತ್ತಾಯಿತು. ಬೇಗ ಆಸ್ಪತ್ರೆಗೆ ಸೇರಿಸಬೇಕು ಎಂದು ನಾನು ಹೇಳಿದರೂ ಕೇಳದೆ ಆಡಳಿತ ಸಿಬ್ಬಂದಿ ಅವನು ನಿಮ್ಮ ಮಗನೇ ಎಂದು ಖಾತ್ರಿ ಮಾಡಿ ಪೇಪರ್‌ಗೆ ಸಹಿ ಹಾಕಿ ಎಂದು ಹೇಳಿದ್ದರು ಎಂದು ಆದಿತ್ಯ ಪ್ರಭು ತಾಯಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Rain News : ಕಾಫಿನಾಡಲ್ಲಿ ಮಳೆ ಅಬ್ಬರ; ಹಾನಿ ಭಯಂಕರ, ಜನ ತತ್ತರ

ಹೀಗಾಗಿ ಆದಿತ್ಯ ಸಾವಿಗೆ ಕಾರಣರಾದ ಪಿಇಎಸ್ ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ತನಿಖಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Exit mobile version