ಬೆಂಗಳೂರು: ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವಕ್ಕೆ ಅನುಮತಿ ನೀಡಲು ಒತ್ತಾಯಿಸಿ ಚಾಮರಾಜಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ 20 ಹಿಂದು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಚಾಮರಾಜಪೇಟೆ ಮೈದಾನ ಬಳಿಯ ಅಯ್ಯಪ್ಪನ ದೇವಾಲಯದ ಬಳಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹೀಗಾಗಿ ಚಾಮರಾಜಪೇಟೆ ಮೈದಾನದ ಪಕ್ಕದ ಮಹದೇಶ್ವರ ದೇವಾಲಯದ ಅರಳಿಮರದ ಬಳಿ ಗಣೇಶ ಪ್ರತಿಷ್ಠಾಪನೆ ಹಾಗೂ ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯ ಮೂಲಕ ಗಣೇಶನ ಮೆರವಣಿಗೆಗೆ ಅನುಮತಿ ನೀಡಬೇಕು ಎಂದು ಹಿಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಪೊಲೀಸರು ಒಪ್ಪದೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು 20 ಹಿಂದು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಹೇಳೋದೇನು?
ಚಾಮರಾಜಪೇಟೆ ಮೈದಾನ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ. ಆದರೆ, ಚಾಮರಾಜಪೇಟೆ ಮಲೈ ಮಹದೇಶ್ವರ ದೇವಸ್ಥಾನ ಬಳಿ ಗಣೇಶ ಪ್ರತಿಷ್ಠಾಪನೆಗೆ ಹಿಂದು ಸಂಘಟನೆಗಳು ಅನುಮತಿ ಕೇಳುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಾವು ಎಂದಿನಂತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯೇ ಗಣೇಶ ಪ್ರತಿಷ್ಠಾಪನೆ ಮಾಡಲು ಸೂಚಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಅಯ್ಯಪ್ಪಸ್ವಾಮಿ ದೇವಾಲಯದಿಂದ ಯಡಿಯೂರು ಕೆರೆಗೆ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಈಗ ಮಲೈ ಮಹದೇಶ್ವರ ದೇವಸ್ಥಾನ ಬಳಿ ಗಣೇಶ ಪ್ರತಿಷ್ಠಾಪನೆ ಮಾಡಿ, ಜೆಜೆ ನಗರ, ಪಾದರಾಯನ ಪುರ, ಟೌನ್ ಹಾಲ್, ಚಾಮರಾಜಪೇಟೆ, ಸಿರ್ಸಿ ಸರ್ಕಲ್ ಏರಿಯಾದಲ್ಲಿ ಮೆರವಣಿಗೆಗಾಗಿ ಅನುಮತಿ ಕೇಳುತ್ತಿದ್ದಾರೆ. ನಾವು ಅನುಮತಿ ನೀಡದಿದ್ದಕ್ಕೆ ಠಾಣೆಗೆ ಬಂದು ಹಿಂದು ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ತೀರ್ಪಿನಿಂದ ಸಿಗದ ಅನುಮತಿ
ಇತ್ತೀಚೆಗೆ ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಮುಸ್ಲಿಂ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿತ್ತು. ಇದರಿಂದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಹಿಂದು ಕಾರ್ಯಕರ್ತರು ಮೈದಾನ ಪಕ್ಕದಲ್ಲಾದರೂ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಹರ್ಷ ಹತ್ಯೆಗೆ ನಡೆದಿತ್ತು 15 ದಿನಗಳ ಸಂಚು: 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA