Site icon Vistara News

Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Dengue Fever

ರಾಯಚೂರು: ಜಿಲ್ಲೆಯಲ್ಲಿ 6 ವರ್ಷದ ಮಗುವಿನಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಸಿಂಧನೂರು ತಾಲೂಕಿನ ಕಣ್ಣೂರು ಗ್ರಾಮದ 6 ವರ್ಷದ ಸಾಕ್ಷಿ ಎಂಬ ಮಗುವಿನಲ್ಲಿ ಡೆಂಗ್ಯೂ ಜ್ವರದ (Dengue Fever) ಲಕ್ಷಣ ಕಂಡುಬಂದಿದ್ದು, ಮಗುವಿನ ರಕ್ತದ ಮಾದರಿ ಸಂಗ್ರಹ ಮಾಡಿದ್ದು, ಸದ್ಯ ಬೆಂಗಳೂರಿನ ಜೆಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿಗೆ ಡೆಂಗ್ಯೂ ದೃಢವಾದ ಹಿನ್ನೆಲೆಯಲ್ಲಿ ಕಣ್ಣೂರು ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈವರೆಗೂ ಜಿಲ್ಲೆಯಲ್ಲಿ 1060 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 142 ಡೆಂಗ್ಯೂ ಪ್ರಕರಣಗಳು ಪತ್ತೆ

ದಾವಣಗೆರೆ: ಜಿಲ್ಲೆಯಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಜಿಲ್ಲೆಯಲ್ಲಿ 1904 ಪ್ರಕರಣಗಳು ಗುರುತಿಸಲಾಗಿತ್ತು. ಇದೀಗ 1380 ಮಂದಿಗೆ ಟೆಸ್ಟ್ ಮಾಡಿದಾಗ ಮತ್ತೆ 142 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ರೋಗಿಗಳಿಗೆ ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ ಯಾವುದೇ ಸಾವು ದಾಖಲಾಗಿಲ್ಲ.

ಇದನ್ನೂ ಓದಿ | International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಇನ್ನು ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಅಧಿಕವಾಗಿವೆ. ಡೆಂಗ್ಯೂ ಪ್ರಕರಣ ಪತ್ತೆಗೆ ಪ್ರಾಥಮಿಕ, ತಾಲೂಕು, ಜಿಲ್ಲಾ ಅರೋಗ್ಯ ಕೇಂದ್ರಗಳ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದ್ದು, ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಲಾರ್ವಾ ಸಮೀಕ್ಷೆ ಮಾಡಿ ಶುಚಿತ್ವದ ಕುರಿತು ತಿಳುವಳಿಕೆ ನೀಡುತ್ತಿದ್ದಾರೆ.

ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

Exit mobile version