ಬೆಂಗಳೂರು: ಆಡಳಿತ ವೆಚ್ಚ ಕಡಿಮೆ ಮಾಡಲು ಕೆಲವು ಇಲಾಖೆಗಳ ವಿಲೀನ ಹಾಗೂ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಲಾಗಿದೆ.
ವಿವಿಧ ಸರ್ಕಾರಿ ಇಲಾಖೆ, ಕಚೇರಿಗಳ ವಿಲೀನ, ರದ್ದುಗೊಳಿಸುವಿಕೆ, ಮಂಜೂರಾಗಿರುವ ವಿವಿಧ ವೃಂದಗಳ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ, ಹುದ್ದೆಗಳ ರದ್ದತಿ ಹಾಗೂ ಮರುವಿನ್ಯಾಸ ಮಾಡಲು ರಚಿಸಿದ್ದ ಸಚಿವ ಸಂಪುಟ ಉಪಸಮಿತಿಯು ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಪಡಿಸಲು ಶಿಪಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀಟ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಪಡಿಸಲು ಶಿಫಾರಸು ಮಾಡಿರುವ ವರದಿಯಲ್ಲಿ ಸದರಿ ಇಲಾಖೆಯ ವಿಷಯಗಳನ್ನು ಬೇರೆ ಇಲಾಖೆಗೆ ವರ್ಗಾಯಿಸುವ ಬಗ್ಗೆ ತಿಳಿಸಲಾಗಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಿ ಈ ಇಲಾಖೆಯಲ್ಲಿನ ವಿಷಯಗಳನ್ನು ಆರ್ಥಿಕ ಇಲಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.