Site icon Vistara News

Dk Shivakumar: ಮೆಟ್ರೋ ಲಾಸ್‌ನಲ್ಲಿ ಇಲ್ಲ, 6 ಕೋಟಿ ರೂ. ಲಾಭದಲ್ಲಿದೆ; ಡಿಕೆ ಶಿವಕುಮಾರ್‌

Dk shivakumar meeting

ಬೆಂಗಳೂರು: ದೆಹಲಿ ಮೆಟ್ರೋ ರೈಲು ನಂತರ ನಮ್ಮದು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ (Metro Train) ಆಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಯೋಗದಲ್ಲಿ ಬಿಎಂಆರ್‌ಸಿಎಲ್‌ (BMRCL) ಕಾರ್ಯನಿರ್ವಹಿಸುತ್ತಿದೆ. 48 ಕೋಟಿ ರೂ. ಆದಾಯದಲ್ಲಿ 42 ಕೋಟಿಯಷ್ಟು ಹಣವು ಮೆಟ್ರೋ ಕಾರ್ಯಾಚರಣೆಗಾಗಿಯೇ ಖರ್ಚಾಗುತ್ತಿದೆ. ಬಂಡವಾಳ ಹೂಡಿಕೆ ಹೊರತಾಗಿಯೂ 6 ಕೋಟಿ ರೂ. ಲಾಭದಲ್ಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK shivakumar) ತಿಳಿಸಿದ್ದಾರೆ.

ಮೆಟ್ರೋ ರೈಲು ನಿಗಮದ ಅಧಿಕಾರಿಗಳ (ಬಿಎಂಆರ್‌ಸಿಎಲ್‌) ಜತೆಗೆ ಡಿಕೆ ಶಿವಕುಮಾರ್‌ ಮಂಗಳವಾರ (ಜೂ. 6) ಸಭೆ ನಡೆಸಿದರು. ಮೆಟ್ರೋ ಕಾರ್ಯನಿರ್ವಹಣೆ, ಮುಂದಿನ ಕಾರ್ಯಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್‌, ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿದೆ. ಜಾಹೀರಾತು ಬಗ್ಗೆ ಇರುವ ನಿರ್ಬಂಧವನ್ನು ಸರಿಪಡಿಸುತ್ತೇವೆ. ಇದರ ಜತೆಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್‌ಅನ್ನು ಗ್ರೂಪ್ ಕ್ಯಾಪಿಟಿವ್ ಮೂಲಕ ಮತ್ತಷ್ಟು ಕಡಿಮೆ ದರಕ್ಕೆ ಪಡೆಯುವ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.

ಸರ್ಜಾಪುರ ಟು ಹೆಬ್ಬಾಳದವರೆಗೆ ಮೆಟ್ರೋ ಓಡಾಟ ಯಾವಾಗ?

ಮೆಟ್ರೋ ವಿಸ್ತರಣೆ ಕುರಿತು ಕೂಡ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್‌, 2ನೇ ಹಂತದ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗಾಗಿ ಕಾಯುತ್ತಿದ್ದೇವೆ. 3ಎ ಹಂತದ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಮೀಕ್ಷೆ ನಡೆಯುತ್ತಿದೆ. ಮುಂದೆ ಇದನ್ನು ಎಲ್ಲೆಲ್ಲಿ ವಿಸ್ತರಣೆ ಮಾಡಬಹುದು ಎಂದು ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಇನ್ನು ಅನುಮತಿ ನೀಡಬೇಕಿದೆ. ಕೆಲವು ದಾಖಲೆಗಳನ್ನು ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ನಾನು ದೆಹಲಿಗೆ ಹೋಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಯಾವಾಗ?

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗಿನ ಮಾರ್ಗ ಕೂಡ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಉಳಿದಂತೆ ಬೈಯ್ಯಪ್ಪನಹಳ್ಳಿ – ಕೆ.ಆರ್ ಪುರಂ ಮೆಟ್ರೋ ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕೆಂಗೇರಿ ಹಾಗೂ ಚಲಘಟ್ಟ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ, ನಾಗಸಂದ್ರ ಹಾಗೂ ಮಾದವಾರ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು. ಇನ್ನು ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ಅಕ್ಟೋಬರ್ ನವೆಂಬರ್ ವೇಳೆಗೆ ಆಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Medical Negligence: ಛೆ ಎಂಥ ನಿರ್ಲಕ್ಷ್ಯ! ಯಾದಗಿರಿಯಲ್ಲಿ ಗರ್ಭಿಣಿಗೆ ಸಿಗದ ಚಿಕಿತ್ಸೆ; ಹೊಟ್ಟೆಯಲ್ಲೇ ಶಿಶು ಸಾವು

ಮೆಟ್ರೋ ಕಾಮಗಾರಿ ವಿಳಂಬ

ಮೆಟ್ರೋ ಕಾಮಗಾರಿ ವಿಳಂಬ ಆರೋಪವು ಇದೆ. ರಾತ್ರಿ ವೇಳೆ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ಮಾಡಬೇಕು. ಈ ವಿಚಾರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಡಿ.ಕೆ ಶಿವಕುಮಾರ್‌ ಹೇಳಿದರು. ಇನ್ನು ಸಭೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version