ಬೆಂಗಳೂರು: ಸಾರ್ವಜನಿಕರ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್ ಅನ್ನು ಆರಂಭ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್ ಜತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಒದಗಿಸಿದೆ. ಸರ್ಕಾರವು ʼನಮ್ಮ ಕ್ಲಿನಿಕ್ʼಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದ್ದು, ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆಗೆ ಅವಕಾಶ ನೀಡಿದೆ.
ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದುಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಿವೆ.
ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯದ ಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಿ logo4nammaclinic@gmail.com ಕಳುಹಿಸಬೇಕು. ಆಯ್ಕೆಯಾದ ವಿನ್ಯಾಸವನ್ನು ಡಿಸೈನ್ ಮಾಡಿದವರಿಗೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಂದ ವಿಶೇಷ ವೈಯಕ್ತಿಕ ಗೌರವ ಸಿಗಲಿವೆ. ಆಗಸ್ಟ್ 5ರಿಂದ ಆಗಸ್ಟ್ 15ರ ಒಳಗೆ ಲೊಗೋ ವಿನ್ಯಾಸ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ | Multi Speciality Hospital | ವರದಿ ಪಡೆದ ಬಳಿಕ ಆಸ್ಪತ್ರೆ ನಿರ್ಮಾಣದ ತೀರ್ಮಾನವೆಂದ ಸಿಎಂ ಬೊಮ್ಮಾಯಿ