Site icon Vistara News

Gurulingeshwara Mutt: ದುರುಸ್ತಿ ಕಾರ್ಯಕ್ಕೆ ವಿರೋಧ; ಕಲಾದಗಿ ಗುರುಲಿಂಗೇಶ್ವರ ಮಠಕ್ಕೆ ಬೀಗ ಜಡಿದ ಭಕ್ತರು

Gurulingeshwara Mutt

ಬಾಗಲಕೋಟೆ: ಪೀಠಾಧಿಪತಿ ನೇಮಕ ವಿವಾದ ಕೋರ್ಟ್‌ನಲ್ಲಿ ಇರುವಾಗಲೇ ಶ್ರೀಗಳು ಮಠದ ದುರುಸ್ತಿ ಕಾರ್ಯ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಭಕ್ತರು, ಮಠದ (Gurulingeshwara Mutt) ಬಾಗಿಲಿಗೆ ಬೀಗ ಜಡಿದಿರುವ ಘಟನೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ನಡೆದಿದೆ.

ಕಲಾದಗಿ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ವಿರುದ್ಧ ಭಕ್ತರು ಹೋರಾಟ ನಡೆಸುತ್ತಿದ್ದು, ಸ್ವಾಮೀಜಿಗಳು ಮಠ ಪ್ರವೇಶಿಸಬಾರದೆಂದು ಬೀಗ ಹಾಕಿದ್ದಾರೆ. ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ, ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಸ್ವಾಮೀಜಿ ಮಠ ಪ್ರವೇಶಿಸಲಿ ಎಂದು ಭಕ್ತರು ಹೇಳಿದ್ದಾರೆ.

ಏನಿದು ಕಲಾದಗಿ ಮಠ ವಿವಾದ?

2019ರಲ್ಲಿ ಕಲಾದಗಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ನಂತರ ಗುರುಲಿಂಗೇಶ್ವರ ಮಠಕ್ಕೆ ಪೀಠಾಧಿಪತಿ ನೇಮಕ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಪ್ರಸಕ್ತ ಮಠದ ಮೇಲ್ವಿಚಾರಣೆಯನ್ನು ಗಂಗಾಧರ ಸ್ವಾಮೀಜಿ ನಡೆಸುತ್ತಿದ್ದಾರೆ. ಅವರು ಮಠಕ್ಕೆ ನಾನೇ ಪೀಠಾಧಿಪತಿ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎನ್ನುವುದು ಜನರ ಆಕ್ಷೇಪ.

ಗಂಗಾಧರ ಸ್ವಾಮೀಜಿ ನಡೆಗೆ ವಿರೋಧಿ ಬಣದಿಂದ ಅಸಮಾಧಾನ ವ್ಯಕ್ತವಾಗಿದೆ. ಗುರುಲಿಂಗೇಶ್ವರ ಮಠದ ಪೀಠಾಧ್ಯಕ್ಷರ ನೇಮಕ ವಿವಾದ ಕೋರ್ಟ್ ಮೆಟ್ಟಿಲೇರಿದ್ದರೂ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಜತೆಗೆ ಮಠಕ್ಕೆ ಸಂಬಂಧಿಸಿದ ಹೊಲ ಬಿತ್ತನೆಗೆ ಗಂಗಾಧರ ಸ್ವಾಮೀಜಿ ಮುಂದಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ | Nigama Mandali : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್‌ ನೇಮಕ

ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ತೂರಿದ ಮಹಿಳೆ

ಶ್ರೀಶೈಲ ಪೀಠದ ಜಗದ್ಗುರು ರಂಭಾಪುರಿ ಶ್ರೀಗಳ (Rambhapuri Shri) ಕಾರನ್ನು ಅಡ್ಡಗಟ್ಟಲು ಯತ್ನಿಸಿದ ಮತ್ತು ಮಹಿಳೆಯೊಬ್ಬರು ಕಾರಿಗೆ ಚಪ್ಪಲಿ (woman throws Sandals) ತೂರಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ (Bagalakote News) ಕಲಾದಗಿಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿ ಶನಿವಾರ ಈ ಘಟನೆ ನಡೆದಿದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಮಹಿಳೆಯರನ್ನು ಚದುರಿಸಿದರು.‌

ಕಾರ್ಯಕ್ರಮವೊಂದರ ನಿಮಿತ್ತ ಬಾಗಲಕೋಟೆಗೆ ಬಂದಿದ್ದ ಶ್ರೀಶೈಲ ಪೀಠದ ರಂಭಾಪುರಿ ಶ್ರೀಗಳು ಕಲಾದಗಿಯಲ್ಲಿರುವ ಮಠಕ್ಕೆ ಹೊರಟಿದ್ದರು. ಆದರೆ, ಕಲಾದಗಿ ಮಠದ ವಿಚಾರಕ್ಕೆ ಸಂಬಂಧಿಸಿ ವಿವಾದ ಇರುವುದರಿಂದ ಅಲ್ಲಿಗೆ ಹೋಗಬಾರದು ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪದ ಹೊರತಾಗಿಯೂ ಶ್ರೀಗಳು ಅಲ್ಲಿಗೆ ಹೋಗಿದ್ದನ್ನು‌ ಪ್ರತಿಭಟಿಸಿ ದಾಳಿ ನಡೆಸಲಾಗಿದೆ. ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆದು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿರುವ ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಗುರುಲಿಂಗೇಶ್ವರ ಮಠದ ಪೀಠಾಧಿಪತಿಗಳು 2019ರಲ್ಲಿ ಲಿಂಗೈಕ್ಯರಾಗಿದ್ದರು. ಮುಂದೆ ಪೀಠಾಧಿಪತಿಗಳು ಯಾರಾಗಬೇಕು ಎಂಬ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಇಬ್ಬರು ಶ್ರೀಗಳ ನಡುವೆ ವಿವಾದದಿಂದ ಗುರುಗಳ ಆಯ್ಕೆ ಆಗಿರಲಿಲ್ಲ. ಬದಲಾಗಿ ವಿವಾದ ಕೋರ್ಟ್‌ ಮೆಟ್ಟಿಲು ಹತ್ತಿತ್ತು.

ಈಗ ವಿವಾದ ಕೋರ್ಟ್‌ನಲ್ಲಿರುವುದರಿಂದ ರಂಭಾಪುರಿ ಶ್ರೀಗಳು ಕಲಾದಗಿ ಮಠಕ್ಕೆ ಭೇಟಿ ನೀಡುವುದು ಸರಿಯಲ್ಲ ಎನ್ನುವುದು ವಾದವಾಗಿದೆ. ಶ್ರೀಗಳು ಮಠಕ್ಕೆ ಭೇಟಿ ನೀಡುವುದಲ್ಲದೆ, ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ತಕರಾರು ಎದುರಾಗಿತ್ತು. ಇದೆಲ್ಲದರ ಒಟ್ಟು ಮೊತ್ತವಾಗಿ ಪ್ರತಿಭಟನೆ ಭುಗಿಲೆದ್ದಿತ್ತು.

ಶ್ರೀಗಳು ಕಲಾದಗಿಗೆ ಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ತಡೆಯಲು ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅದರಲ್ಲಿ ಮಹಿಳೆಯರೂ ಸೇರಿದ್ದರು. ಆದರೆ, ಈ ವಿಚಾರ ತಿಳಿದಿದ್ದರೂ ಜನರನ್ನು ಸಮಾಧಾನ ಮಾಡಬಹುದು ಎಂಬ ಉದ್ದೇಶದಿಂದ ಮತ್ತು ಅವರ ಜತೆ ಮಾತನಾಡುವ ಉದ್ದೇಶದಿಂದ ಶ್ರೀಗಳು ಅಲ್ಲಿಗೆ ತೆರಳಿದ್ದರು.

ಆದರೆ, ಕಲಾದಗಿಗೆ ಬರುತ್ತಿದ್ದಂತೆಯೇ ಅವರ ಕಾರನ್ನು ತಡೆಯುವ ಪ್ರಯತ್ನ ನಡೆಯಿತು. ಕಾರು ನಿಲ್ಲಿಸದೆ ಮುಂದೆ ಹೋದಾಗ ಮಹಿಳೆಯೊಬ್ಬರು ಚಪ್ಪಲಿ ತೆಗೆದು ಕಾರಿನ ಮೇಲೆ ಎಸೆದರು. ಕೂಡಲೇ ಅಲ್ಲಿದ್ದ ಭಕ್ತರು ಮಹಿಳೆಯನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಇದೀಗ ಕಲಾದಗಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಮಠಕ್ಕೆ ಸಂಬಂಧಿಸಿ ಇಬ್ಬರು ಭಕ್ತರ ಗುಂಪುಗಳ ನಡುವೆ ಜಗಳ ಏರ್ಪಟ್ಟಿದೆ.

ಇದನ್ನೂ ಓದಿ : Bigg Boss Contestant : ಸುಳ್ಳು ದೂರು ಕೊಟ್ಟು ತಗಲಾಕೊಂಡ ಬಿಗ್‌ಬಾಸ್‌ ಸ್ಪರ್ಧಿ; ಜೈಲೇ ಗತಿನಾ!

Exit mobile version