ಕೊಡಗು: ರಾಜ್ಯದ ಹಲವು ಕಡೆ ಈಗಾಗಲೇ ಕಾಲಿಟ್ಟಿರುವ ಧರ್ಮ ದಂಗಲ್ ಕೊಡಗು ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿದೆ. ಪೊನ್ನಂಪೇಟೆ ತಾಲೂಕಿನ ಹರಿಹರ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬ ಹಿಂದುಗಳ ಹೆಸರಿನ ಕಾರ್ಡ್ ತೋರಿಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆತನ ಅಂಗಡಿಯನ್ನು ಎತ್ತಂಗಡಿ ಮಾಡಿಸಲಾಗಿದ್ದು, ಆತನ ಗುರುತಿನ ಚೀಟಿಯನ್ನು ಪೊಲೀಸರಿಗೆ ಒಪ್ಪಿಸಿ ಸತ್ಯಾಸತ್ಯತೆ ತಿಳಿಸುವಂತೆ ಕೋರಲಾಗಿದೆ.
ದೇವಸ್ಥಾನದ ಆವರಣದಲ್ಲಿ ಹಿಂದು ಪರ ಸಂಘಟನೆಗಳು ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಆತನ ಬಳಿ ಇದ್ದ ಕಾರ್ಡ್ ನೋಡಿ ಹಿಂದು ಪರ ಸಂಘಟನೆಗಳ ಮುಖಂಡರಿಗೆ ಅನುಮಾನ ಮೂಡಿದೆ. ಕಾರ್ಡ್‌ನ ಮುಂಬದಿಯಲ್ಲಿ ಇರುವ ಹೆಸರಿಗೂ ಹಿಂಬದಿಯಲ್ಲಿ ಇರುವ ತಂದೆಯ ಹೆಸರಿಗೂ ಯಾವುದೇ ರೀತಿಯ ತಾಳೆ ಬಂದಿಲ್ಲ ಎನ್ನಲಾಗಿದೆ. ಇದರಿಂದ ಹಿಂದು ಸಂಘಟನೆಯವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಅಂಗಡಿ ಇಟ್ಟ ವ್ಯಕ್ತಿಗೆ ಹಣೆಗೆ ತಿಲಕವನ್ನು ಇಟ್ಟುಕೊಳ್ಳಲು ಹೇಳಿದ್ದಾರೆ. ಆತನ ಮುಂದೆ ಕುಂಕುಮವನ್ನೂ ಹಿಡಿದಿದ್ದಾರೆ. ಅದಕ್ಕೆ ಆತ ಯಾವುದೇ ಪ್ರತಿರೋಧ ತಾಳದೆ ಕುಂಕುಮವನ್ನು ಹಣೆಗೆ ಇಟ್ಟುಕೊಂಡಿದ್ದಾನೆ.
ಆ ವ್ಯಕ್ತಿಯು ರವೀಶ್ ಕುಮಾರ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಹೊಂದಿದ್ದಾನೆ. ಕೊನೆಗೆ ವಿಚಾರಣೆ ನಡೆಸಿದಾಗ ಈತನ ಹೆಸರು ಮಹಮ್ಮದ್ ಇಶಾನ್ ಎಂಬುದಾಗಿ ಹೇಳಿಕೊಂಡಿದ್ದಾನೆ ಎಂದು ಹಿಂದು ಸಂಘಟನೆಯವರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗಡಿಯನ್ನು ಬಂದ್ ಮಾಡಿಸಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಆರೋಗ್ಯ ಚೇತರಿಕೆ, ಪೊಲೀಸರಿಂದ ಆಸ್ಪತ್ರೆಯಲ್ಲೇ ವಿಚಾರಣೆ ಶುರು
ಇದೊಂದು ಜಿಹಾದಿ ಕೃತ್ಯ- ಹಿಂದು ಸಂಘಟನೆ ನಾಯಕಿ
ಇವರ ಬಳಿ ಹಿಂದುಗಳ ಐಡಿ ಕಾರ್ಡ್ ಇದ್ದು, ಯಾಕೆ ಹೀಗೆ ತಮ್ಮ ಗುರುತನ್ನು ಮುಚ್ಚಿಡುತ್ತಿದ್ದಾರೆ? ಇದು ಜಿಹಾದಿಗಳ ಕೃತ್ಯವಾಗಿದೆ. ಅವರು ಬೇಕಿದ್ದರೆ ತಮ್ಮ ನೈಜ ಹೆಸರಿನಲ್ಲಿಯೇ ಅಂಗಡಿಯನ್ನು ಇಡಬಹುದಿತ್ತು. ಆದರೆ, ಯಾಕೆ ಹೀಗೆ ನಕಲಿ ಐಡಿಯನ್ನು ಬಳಸುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಂದುಯೇತರರಿಗೆ ಅವಕಾಶವನ್ನು ಕೊಡುವುದಿಲ್ಲ ಎಂದು ಹೇಳಿದ್ದರೂ ಈ ರೀತಿ ವಾಮ ಮಾರ್ಗದಲ್ಲಿ ಬರುತ್ತಿರುವುದು ಸರಿಯಾದ ಸಂಗತಿಯಲ್ಲ. ಇದು ಎಲ್ಲ ಹಿಂದುಗಳೂ ಎಚ್ಚೆತ್ತುಕೊಳ್ಳಬೇಕಾದ ವಿಚಾರವಾಗಿದೆ ಎಂದು ಹಿಂದು ಸಂಘಟನೆಯ ಮಹಿಳಾ ಮುಖಂಡೆಯೊಬ್ಬರು ಹೇಳಿದ್ದಾರೆ.
ಈಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವನು ಸಹ ಇದೇ ರೀತಿ ಹಿಂದು ಹೆಸರಿನ ಫೇಕ್ ಐಡಿಯನ್ನು ಹೊಂದಿದ್ದ. ಹೀಗಾಗಿ ಹಿಂದುಗಳಿಗೆ ಧರ್ಮ ಜಾಗೃತಿ ಇರಬೇಕು. ಈತನ ಹೆಸರು ಮಹಮ್ಮದ್ ಇಶಾನ್ ಆಗಿದ್ದು, ಹಿಂದು ಹೆಸರಿನ ಫೇಕ್ ಐಡಿ ಹೊಂದಿದ್ದಾನೆ. ಇವನು ಬೊಟ್ಟು ಇಟ್ಟುಕೋ ಎಂದರೂ ಇಟ್ಟುಕೊಳ್ಳುತ್ತಾನೆ. ಎಲ್ಲದಕ್ಕೂ ಸಿದ್ಧನಿದ್ದಾನೆ. ಆದರೆ, ಇದರ ಹಿಂದಿನ ಆತನ ಮುಖವಾಡ ಬಯಲಾಗಿದೆ. ಹೀಗಾಗಿ ಈ ಅಂಗಡಿಯನ್ನು ತೆರವು ಮಾಡಿಸುತ್ತಿದ್ದೇವೆ ಎಂದು ಅವರು ಆಕ್ರೋಶವನ್ನು ಹೊರಹಾಕಿದ್ದಾರೆ.
ಈಗ ಆತ ನಿಜವಾಗಿಯೂ ನಕಲಿ ಐಡಿ ಕಾರ್ಡ್ ಹೊಂದಿದ್ದನೇ ಅಥವಾ ಬಿಹಾರಿಯೇ ಆಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಏಳು ಕಡೆಗಳಲ್ಲಿ ಭಯೋತ್ಪಾದನೆ ವಿರುದ್ಧ ಜಾಗೃತಿ ಅಭಿಯಾನ, ಶಾರಿಕ್ ಪರ ವಕಾಲತ್ತು ಮಾಡದಂತೆ ಮನವಿ