Site icon Vistara News

Dharwad News: ಡಾ. ಜಿನದತ್ತ ಹಡಗಲಿ ಸ್ನೇಹಜೀವಿ; ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

Congratulatory programme for dr Jinadatta Hadagali

ಧಾರವಾಡ: ಮಧುರ ಮಾತು, ಸದಾ ಹಸನ್ಮುಖಿ, ಆದರ್ಶ ವ್ಯಕ್ತಿತ್ವ ಹಾಗೂ ಸ್ನೇಹಜೀವಿಯಾದ ಡಾ. ಜಿನದತ್ತ ಹಡಗಲಿ ಎಲ್ಲರಿಗೂ ಪ್ರೀತಿ ಹಾಗೂ ನಗು ಹಂಚಿದ್ದಾರೆ ಎಂದು ಡಾ. ಮಲ್ಲಿಕಾರ್ಜುನ ಸ್ವಾಮೀಜಿ (Dharwad News) ಅಭಿಪ್ರಾಯಪಟ್ಟರು.

ಡಾ. ಜಿನದತ್ತ ಹಡಗಲಿ ಅಭಿನಂದನಾ ಸಮಿತಿ ವತಿಯಿಂದ ನಗರದ ಜನತಾ ಶಿಕ್ಷಣ ಸಮಿತಿ ಸನ್ನಿಧಿ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಡಾ. ಜಿನದತ್ತ ಹಡಗಲಿ ಅವರಿಗೆ ಅಭಿನಂದನೆ, ಸ್ನೇಹ ಸಿಂಧು ಗ್ರಂಥ ಲೋಕಾರ್ಪಣೆ, ಸಾಹಿತ್ಯಾವಲೋಕನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಡಾ. ವೈ.ಎಂ.ಯಾಕೊಳ್ಳಿ ಮಾತನಾಡಿ, ಡಾ. ಜಿನದತ್ತ ಹಡಗಲಿ ಅವರ ವೈಚಾರಿಕ ಕೃತಿ ‘ಸಿಂಚನ’ ವಿವಿಧ ವಿಷಯದ ಬಾನುಲಿ ಭಾಷಣಗಳ ಕೃತಿ. ಜೀವನ ಮೌಲ್ಯ, ಕಾಯಕ ತತ್ವ, ಗರತಿ ಗಮ್ಮತ್ತು ವಿಷಯ ಒಳಗೊಂಡಿದೆ ಎಂದರು.

ಇದನ್ನೂ ಓದಿ: PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಬಾನುಲಿ ಬರಹಗಳ ಬಗ್ಗೆ ಬೆಳಕು ಚೆಲ್ಲಿದ ರಂಗಕರ್ಮಿ ಡಾ. ಶಶಿಧರ ನರೇಂದ್ರ, ಡಾ. ಜಿನದತ್ತ ಹಡಗಲಿ ಅವರ ಬಾನುಲಿ ಬರಹ ಬಹಳ ಅರ್ಥಪೂರ್ಣ. ಅವುಗಳಲ್ಲಿ ಬಳಸಿದ ಶಬ್ದ ಪ್ರಯೋಗ, ವಿಷಯ ವಸ್ತುಗಳು ಮತ್ತು ಸಮಗ್ರತೆ ಬಹಳ ವಿಶಿಷ್ಟ ಎಂದು ತಿಳಿಸಿದರು.

‘ನನ್ನ ಗುರು ನನ್ನ ಹೆಮ್ಮೆ’ ಕುರಿತಂತೆ ವೇದ ವಿಜ್ಞಾನ ಅಂಕಣ ಬರಹಗಾರ, ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಮಾತನಾಡಿ, ಗುರುಗಳು ನಮಗೆ, ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಕೂಚಿ, ದಾರಿದೀಪ, ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಅಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟುವ ತನಕ ಸಹಾಯ ಮಾಡುವವನೇ ಶ್ರೇಷ್ಠಗುರು. ಪ್ರಶಾಂತತೆ, ಕ್ರೋಧರಾಹಿತ್ಯ, ಸದಾಚಾರಯೋಗ್ಯ, ಸಹೃದಯಿ ಮತ್ತು ತತ್ವದರ್ಶಿ- ಈ ಐದು ವಿಶೇಷ ಗುಣಗಳಿದ್ದವರು ‘ಗುರು’ ಎಂದು ಕರೆಯಲ್ಪಡುತ್ತಾರೆ. ಅಂತಹ ಪಂಚ ಲಕ್ಷಣಗಳು ಡಾ. ಜಿನದತ್ತ ಹಡಗಲಿ ಗುರುಗಳಲ್ಲಿ ಕಾಣುತ್ತೇವೆ. ಚಿನ್ನದಂಥ ಗುಣಗಳಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು ಎಂದು ತಿಳಿಸಿದರು.

ಇದೇ ವೇಳೆ ಡಾ. ಜಿನದತ್ತ ಹಡಗಲಿ ಅವರಿಗೆ ಕಲಿಸಿದ, ಮಾರ್ಗದರ್ಶನ ನೀಡಿದ ಗುರುಗಳಿಗೆ ಗುರುವಂದನೆ ಜರುಗಿತು.

ಇದನ್ನೂ ಓದಿ: SSLC Exam 2 Result 2024: ನಾಳೆ ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ

ಈ ಸಂದರ್ಭದಲ್ಲಿ ಡಾ. ಸಂಗಯ್ಯ ಶಿವಪ್ಪಯ್ಯನಮಠ, ಡಾ. ಶಿವಾನಂದ ಟವಳಿ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು, ಡಾ. ಜಿನದತ್ತ ಹಡಗಲಿ ಅಭಿಮಾನಿಗಳು ಪರಿವಾರದವರು ಉಪಸ್ಥಿತರಿದ್ದರು. ಡಾ. ಆರ್.ವಿ.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್.ಎಸ್. ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಬಿ.ಎಂ. ಶರಭೇಂದ್ರ ಸ್ವಾಮಿ ನಿರೂಪಿಸಿದರು.

Exit mobile version