ಧಾರವಾಡ: ನವಕರ್ನಾಟಕ ಪ್ರಕಾಶನದ ʼಪುಸ್ತಕ ಮಳಿಗೆಯ ಶುಭಾರಂಭ ಹಾಗೂ 5 ಕೃತಿಗಳ ಲೋಕಾರ್ಪಣೆʼ ಕಾರ್ಯಕ್ರಮವನ್ನು ಏಪ್ರಿಲ್ 13ರಂದು ಬೆಳಗ್ಗೆ 10ಗಂಟೆಗೆ ವಿದ್ಯಾಕಾಶಿ-ಸಾಂಸ್ಕೃತಿಕ ನಗರಿ ಧಾರವಾಡದ ಮಹಾನಗರ ಪಾಲಿಕೆ ಬಳಿಯ ಎಲ್.ಇ.ಎ. ಕ್ಯಾಂಪಸ್‌ನ ಲಿಂಗಾಯತ ಟೌನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಶಿಕ್ಷಣ ತಜ್ಞ, ಜನಪರ ಚಿಂತಕ ಡಾ. ಜಿ. ರಾಮಕೃಷ್ಣ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಸಾಂಸ್ಕೃತಿಕ ಚಿಂತಕ ರಂಜಾನ್ ದರ್ಗಾ ಮತ್ತು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನಿರ್ದೇಶಕ ಡಾ. ಎಂ. ಚಂದ್ರ ಪೂಜಾರಿ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಲೋಕಾರ್ಪಣೆಯಾಗಲಿರುವ ಕೃತಿಗಳು
- ಡಾ.ಜಿ.ರಾಮಕೃಷ್ಣ ಅವರ ʼಉಪನಿಷತ್ತುಗಳು; ಒಂದು ಸ್ಥೂಲ ನೋಟʼ
- ಡಾ.ರಾವ್ ಸಾಹೇಬ್ ಕಸಬೆ ಅವರ ʼಅಂಬೇಡ್ಕರ್ ಮತ್ತು ಮಾರ್ಕ್ಸ್ʼ (ಕನ್ನಡಕ್ಕೆ ಚಂದ್ರಕಾಂತ ಪೋಕಳೆ)
- ʼಸಾವಿತ್ರಿಬಾಯಿ; ಪ್ರವರ್ತಕಿಯ ಪಯಣʼ (ವ್ಯಕ್ತಿ ಮತ್ತು ಚಿಂತನೆಗಳು)
- ಶಶಿಧರ್ ಡೋಂಗ್ರೆ, ನೀಲಾಂಜನ್ ಪಿ.ಚೌದುರಿ ಅವರ ʼಲೀಲಾವತಿ ಮತ್ತು ಇತರ ವಿಜ್ಞಾನ ನಾಟಕಗಳುʼ
- ಆದಿತ್ಯ ಅಯ್ಯಂಗಾರ್ ಅವರ ʼಭೂಮಿಕಾ; ಸೀತಾ ಕಥನʼ (ಕನ್ನಡಕ್ಕೆ ಜ್ಯೋತಿ.ಎ)
ಬೆಂಗಳೂರಿನ ‘ಹೊಸತು’ ಮಾಸ ಪತ್ರಿಕೆ ಸಹಸಂಪಾದಕಿ ಡಾ. ಎನ್. ಗಾಯತ್ರಿ, ಜನಪರ ಲೇಖಕಿ, ಚಿಂತಕಿ ಡಾ. ವಿನಯಾ ಒಕ್ಕುಂದ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಂಗಕರ್ಮಿ ಡಾ. ಪ್ರಕಾಶ್ ಗರುಡ ಅವರು ಕೃತಿಗಳ ಪರಿಚಯ ಮಾಡಲಿದ್ದಾರೆ.
ಇದನ್ನೂ ಓದಿ | ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ
ಧಾರವಾಡದ ಲಿಂಗಾಯತ ಎಜುಕೇಷನ್ ಅಸೋಸಿಯೇಷನ್ ಚೇರ್ಮನ್ ಆರ್.ಯು. ಬೆಳ್ಳಕ್ಕಿ, ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾಧ್ಯಕ್ಷ ಡಾ. ಎಲ್. ಆರ್. ಅಂಗಡಿ, ಮೈಸೂರಿನ ರಂಗಕರ್ಮಿ, ಲೇಖಕ ಎಂ. ಶಶಿಧರ ಡೋಂಗ್ರೆ, ಜನಪರ ಲೇಖಕ ಡಾ. ಸದಾಶಿವ ಮರ್ಜಿ, ಧಾರವಾಡದ ಕರ್ನಾಟಕ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕಿ ಡಾ. ಅನುಸೂಯ ಕಾಂಬಳೆ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶಶಿಧರ ತೋಡಕರ್, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕರಾದ ಎ. ರಮೇಶ ಉಡುಪ, ಯು. ಪ್ರೇಮಚಂದ್ರ ಉಪಸ್ಥಿತರಿರಲಿದ್ದಾರೆ.