Site icon Vistara News

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

congratulation ceremony for Dr. Jinadatta Hadagali on 7th July in Dharwad

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಇದೇ ಜು.7 ರಂದು ಭಾನುವಾರ ಡಾ. ಜಿನದತ್ತ ಅ. ಹಡಗಲಿ ಅವರ ಅಭಿನಂದನಾ ಸಮಾರಂಭದ ನಿಮಿತ್ತ ಸಾಹಿತ್ಯಾವಲೋಕನ, ಅಭಿನಂದನಾ ಮತ್ತು ‘ಸ್ನೇಹ ಸಿಂಧು’ ಗ್ರಂಥ ಬಿಡುಗಡೆ ಸಮಾರಂಭ (Dharwad News) ಏರ್ಪಡಿಸಲಾಗಿದೆ.

ಅಭಿನಂದನಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ಜನಪದ ಸಂಗೀತದೊಂದಿಗೆ ಆರಂಭವಾಗಲಿದ್ದು ಖ್ಯಾತ ಜಾನಪದ ಕಲಾವಿದ ಹರ್ಲಾಪುರದ ಶಂಭಯ್ಯ ಹಿರೇಮಠ ಮತ್ತು ಸಂಗಡಿಗರ ತಂಡವು ನಡೆಸಿಕೊಡಲಿದೆ. ನಂತರ ಬೆಳಿಗ್ಗೆ 10.30 ರಿಂದ 12.30 ರವರೆಗೆ ಡಾ. ಜಿನದತ್ತ ಅ. ಹಡಗಲಿ ಅವರ ಸಾಹಿತ್ಯ ಕುರಿತು ವಿಚಾರ ಸಂಕಿರಣವು ನಡೆಯಲಿದ್ದು, ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಧ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Stock Market: 1 ಲಕ್ಷ ಪಾಯಿಂಟ್‌ ಮೈಲಿಗಲ್ಲಿನತ್ತ ಸೆನ್ಸೆಕ್ಸ್‌; ಅಂಕಿ-ಅಂಶ ಹೇಳೋದೇನು?

ಡಾ. ಜಿನದತ್ತ ಅ. ಹಡಗಲಿ ಅವರ ವೈಚಾರಿಕ ಸಾಹಿತ್ಯದ ಕುರಿತು ಸಾಹಿತಿ ಡಾ. ವೈ. ಎಂ. ಯಾಕೊಳ್ಳಿ, ಸಂಪಾದಿತ ಕೃತಿಗಳು ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ಬಾನುಲಿ ಬರಹಗಳು ಕುರಿತು ರಂಗ ಚಿಂತಕ ಡಾ. ಶಶಿಧರ ನರೇಂದ್ರ, ʼನನ್ನ ಗುರು ನನ್ನ ಹೆಮ್ಮೆʼ ಕುರಿತು ಧಾರವಾಡದ ನವೀನಶಾಸ್ತ್ರೀ ಪುರಾಣಿಕ ವಿಚಾರಗಳನ್ನು ಮಂಡಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು ಡಾ. ಹಡಗಲಿ ಅವರ ಗುರುಗಳಾದ ಎಚ್.ಸಿ. ರಟಗೇರಿ, ಪ್ರೊ. ಬಿ.ವಿ. ಗುಂಜೆಟ್ಟಿ, ಪ್ರೊ ವಿ.ಆರ್. ಸಂಗೊಂದಿಮಠ, ಡಾ. ವಿ.ಎಸ್. ಆರಾಧ್ಯಮಠ, ಪ್ರೊ. ವೀಣಾ ಶಾಂತೇಶ್ವರ, ಡಾ.ಉಷಾ ಮೂರ್ತಿ, ಡಾ.ವೀರಣ್ಣ ರಾಜೂರ, ಡಾ. ಬಿ.ವಿ. ಶಿರೂರ, ಡಾ. ಸೋಮಶೇಖರ ಇಮ್ರಾಪುರ, ಡಾ. ಶಾಂತಾದೇವಿ ಸಣ್ಣೆಲ್ಲಪ್ಪನವರ, ಡಾ. ಎಸ್.ವಿ. ಅಯ್ಯನಗೌಡರ, ಡಾ. ಬಿ.ವಿ. ಯಕ್ಕುಂಡಿಮಠ, ಡಾ. ಎ. ಮುರಿಗೆಪ್ಪ, ಪ್ರೊ. ರಾಜಶೇಖರ ಜಾಡರ ಅವರಿಗೆ ಹಡಗಲಿ ಅವರ ಕುಟುಂಬದಿಂದ ಸನ್ಮಾನ ಜರುಗಲಿದೆ.

ಬಳಿಕ ಮಧ್ಯಾಹ್ನ 2 ಗಂಟೆಗೆ ಸಂಗೀತ ಸುಧೆ ಎಂಬ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಹಿಂದೂಸ್ತಾನಿ ಗಾಯಕಿ ವಿದೂಷಿ ಶ್ರೀಮತಿ ಸುಜಾತಾ ಗುರವ, ಗಾಯಕ ಬಸವರಾಜ ಕೆಂಧೂಳಿ, ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ ಹುಮಾಯೂನ ಹರ್ಲಾಪುರ, ಜೀ ಟಿವಿ ಸರಿಗಮಪ ವಿಜೇತ ಗಾಯಕ ಮೆಹಬೂಬಸಾಬ ಹರ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮವು ನಡೆಯಲಿದೆ. ನಂತರ ಡಾ. ಜಿನದತ್ತ ಹಡಗಲಿಯವರ ಜೀವನಾಧರಿತ ‘ಬದುಕಿನ ಹೆಜ್ಜೆಗಳು’ ಸಾಕ್ಷ್ಯಚಿತ್ರ ಪ್ರದರ್ಶನ ಜರುಗಲಿದೆ.

ಇದನ್ನೂ ಓದಿ: NEET PG 2024: ನೀಟ್-ಪಿಜಿ ಪರೀಕ್ಷೆಯ ದಿನಾಂಕ ಪ್ರಕಟ; ಆ. 11ರಂದು ನಡೆಯಲಿದೆ ಟೆಸ್ಟ್‌

ನಂತರ ಮಧ್ಯಾಹ್ನ 3 ಗಂಟೆಗೆ ಅಭಿನಂದನಾ ಸಮಾರಂಭವು ಜರುಗಲಿದ್ದು, ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ.

ಹು-ಧಾ. ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ‘ಸ್ನೇಹಸಿಂಧು’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ‘ಸ್ನೇಹಸಿಂಧು’ ಕೃತಿಯ ಪರಿಚಯ ಮಾಡಲಿದ್ದು, ಹುಬ್ಬಳ್ಳಿಯ ಸ.ಪ್ರ.ದ. ಕಾಲೇಜು ಪ್ರಾಧ್ಯಾಪಕ ಡಾ. ವೈ. ಎಂ. ಭಜಂತ್ರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ಇದೇ ಸಂದರ್ಭದಲ್ಲಿ ಸುಜಾತಾ ಹಡಗಲಿ ಅವರ ಭಾವತರಂಗ ಕವನ ಸಂಕಲನವನ್ನು ವಿಜಯಪುರ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ಓಂಕಾರ ಕಾಕಡೆ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕವಿಸಂ ನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದೆ.

Exit mobile version