Site icon Vistara News

Dharwad News: ಜ್ಯೋತಿರ್ವಿಜ್ಞಾನ ಕಲಿಕೆಯಲ್ಲಿ ವಿದೇಶಿಯರ ಆಸಕ್ತಿ ಹೆಚ್ಚಳ: ಡಾ. ನವೀನಶಾಸ್ತ್ರಿ ಪುರಾಣಿಕ

Increasing interest of foreigners in learning astrology says Dr Navinashastri Puranika

ಧಾರವಾಡ: ಜ್ಯೋತಿಷ್ಯ ಜನರನ್ನು ಹೆದರಿಸುವ ಶಾಸ್ತ್ರವಲ್ಲ, ಮಾನವನನ್ನು ಉನ್ನತಿಯೆಡೆಗೆ ಕರೆದೊಯ್ಯುವುದು ಜ್ಯೋತಿಷ್ಯಶಾಸ್ತ್ರದ ಉದ್ದೇಶ ಎಂದು ವಿದ್ವಾನ್ ಡಾ. ನವೀನಶಾಸ್ತ್ರಿ ಪುರಾಣಿಕ (Dharwad News) ತಿಳಿಸಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ಎನ್.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ “ಜ್ಯೋತಿಷ್ಯಶಾಸ್ತ್ರ ಮತ್ತು ವೈಜ್ಞಾನಿಕ ಚಿಂತನೆಗಳು’ ಕುರಿತು ಉಪನ್ಯಾಸ ನೀಡಿ, ಅವರು ಮಾತನಾಡಿದರು.

ವ್ಯಕ್ತಿಯ ಹಿಂದಿನ ಮೂರು ತಲೆಮಾರು ಹಾಗೂ ಮುಂದಿನ ಮೂರು ತಲೆಮಾರು ಜ್ಯೋತಿಷ್ಯ ಹೇಳುವ ಜ್ಯೋತಿಷಿಗಳು ಪ್ರಸ್ತುತ ನಮ್ಮ ಸಮಾಜದಲ್ಲಿದ್ದಾರೆ. ಆದರೆ ಅವರನ್ನು ನಾವು ಗುರುತಿಸುತ್ತಿಲ್ಲ. ರೋಗಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಜ್ಯೋತಿಷ್ಯದಲ್ಲಿ ರೋಗಗಳಿಗೂ ಚಿಕಿತ್ಸೆ ತಿಳಿಸಲಾಗಿದೆ. ಆಯುಷ್ಯ ವೃದ್ಧಿ ಹಾಗೂ ಮನಸನ್ನು ಸ್ಥಿರವಾಗಿಡಲು ಜ್ಯೋತಿಷ್ಯ ನಮಗೆ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ: Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

ಜ್ಯೋತಿಷ್ಯಶಾಸ್ತ್ರ ಒಂದು ವಿಜ್ಞಾನ ಎಂಬುದನ್ನು ಅರ್ಥ ಮಾಡಿಕೊಂಡಿರುವ ವಿದೇಶಿಯರು ಉತ್ಸಾಹದಿಂದ ಕಲಿಯುತ್ತಿದ್ದಾರೆ. ವಿದೇಶಿ ಜ್ಯೋತಿಷಿಗಳು ನಮ್ಮ ಭವಿಷ್ಯ ಹೇಳಿದರೂ ಅಚ್ಚರಿಪಡಬೇಕಿಲ್ಲ. ಕೆಲ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಜ್ಯೋತಿಷ್ಯ ಕೂಡ ಬರಲಿದೆ ಎಂದರು.

ಜ್ಯೋತಿಷ್ಯಶಾಸ್ತ್ರ ಕಾಲ ಗಣನೆ ಮಾಡಿ ಹೇಳುವ ಶಾಸ್ತ್ರ, ಇದು ಗಣಿತ, ಖಗೋಳಶಾಸ್ತ್ರ ಎಂಬುದನ್ನು ಒಪ್ಪಿಕೊಂಡ ಪಾಶ್ಚಾತ್ಯರು ಜ್ಯೋತಿಷ್ಯ ಕಲಿಯುವುದರೊಂದಿಗೆ ಅದಕ್ಕನುಗುಣವಾಗಿ ಜೀವನ ಕ್ರಮ ರೂಪಿಸಿಕೊಳ್ಳುತ್ತಿದ್ದಾರೆ ತಿಳಿಸಿದರು.

ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಜ್ಯೋತಿಷ್ಯಶಾಸ್ತ್ರದ ಜ್ಞಾನ, ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗದಿರುವುದು ಬೇಸರದ ಸಂಗತಿ. ಜ್ಯೋತಿಷ್ಯವು ಮೂಢನಂಬಿಕೆ ಎಂದು ಹೇಳುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕೂಡ ಭವಿಷ್ಯಕ್ಕಾಗಿ ಜ್ಯೋತಿಷಿಗಳ ಮನೆ ಮುಂದೆ ಸರದಿಯಲ್ಲಿ ನಿಲ್ಲುತ್ತಾರೆ ಎಂದ ಅವರು, ನಿರಂತರ ಕಲಿಕೆ ಇದ್ದರೆ ಮಾತ್ರ ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಾವಿಣ್ಯ ಗಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಮಾನಸಿಕ ಆರೋಗ್ಯ ತಜ್ಞ ಡಾ. ಆನಂದ ಹಂದಿಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

ಈ ಸಂದರ್ಭದಲ್ಲಿ ದತ್ತಿದಾನಿ ಸುಹಾಸ ಜೋಗಳೇಕರ ಹಾಗೂ ಇತರರು ಉಪಸ್ಥಿತರಿದ್ದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.

Exit mobile version