Site icon Vistara News

ಕನ್ನಡ ರಾಜ್ಯೋತ್ಸವ | ಮಾತೃಭಾಷೆಯಲ್ಲಿ ಕಲಿಯುವುದರಿಂದ ಸಂಸ್ಕಾರ ಬೆಳೆಯುತ್ತದೆ: ಪ್ರೊ ನವೀನ ಶಾಸ್ತ್ರಿ ಪುರಾಣಿಕ

ಕನ್ನಡ ರಾಜ್ಯೋತ್ಸವ

ಧಾರವಾಡ: ಮಾತೃಭಾಷೆಯಲ್ಲಿ ಕಲಿಯುವುದರಿಂದ ಸಂಸ್ಕಾರ ಬೆಳೆಯುತ್ತವೆ. ಸಾಹಿತ್ಯ, ಸಂಸ್ಕೃತಿ ಅರ್ಥವಾಗುತ್ತದೆ ಎಂದು ಪ್ರೊ. ವಿದ್ವಾನ್ ನವೀನ ಶಾಸ್ತ್ರಿ ಪುರಾಣಿಕ ಹೇಳಿದ್ದಾರೆ.

ನಗರದ ಶ್ರೀಮತಿ ಲೀಲಾವತಿ ಆರ್ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕನ್ನಡಿಗರು ಹೆಮ್ಮೆಯಿಂದ ಕನ್ನಡ ಕಲಿಯಬೇಕು. ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯದ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ಅನೇಕ ಮಹನೀಯರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಭಾಷೆಯನ್ನು ಉಳಿಸಿ-ಬೆಳೆಸುವ ಹೊಣೆಗಾರಿಕೆಯನ್ನು ನಾವೆಲ್ಲರೂ ನಿಭಾಯಿಸಿದಾಗ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ” ನಾವೆಲ್ಲರೂ ಇಂಗ್ಲಿಷ್ ಅನ್ನು ಬದುಕಲು ಕಲಿಯಬೇಕು. ಆದರೆ ಯಾವುದೇ ಕಾರಣಕ್ಕೂ ಕನ್ನಡವನ್ನು ಮರೆಯಬಾರದು ಎಂದರು. ಶಾಲೆಯ ಮುಖ್ಯಸ್ಥ ಸೋಮೇಶ್‌ ಉಪಸ್ಥಿತರಿದ್ದರು.

ಶಿಕ್ಷಕಿ ಭಾರ್ಗವಿ ಜೋಶಿ ಮಾತನಾಡಿ, ನಮ್ಮ ರಾಜ್ಯ ಹೇಗೆ ಸುಭಿಕ್ಷ ರಾಜ್ಯವಾಗಿ ಬೆಳೆದು ಬಂದಿದೆ ಎಂದು ವಿವರಿಸಿದರು. ವಿದ್ಯಾರ್ಥಿನಿ ಕು. ರೇಣುಕಾ ರಾಜ್ಯೋತ್ಸವದ ಭಾಷಣ ಮಾಡಿದರು. ಶಿಕ್ಷಕಿಯರು ಕನ್ನಡ ಭಾವಗೀತೆ ಹಾಡಿದರು. ಪುಟ್ಟ ಪುಟ್ಟ ಮಕ್ಕಳು ಬೇಂದ್ರೆ ಅವರ ಸಾಹಿತ್ಯದ ಪಾತರಗಿತ್ತಿ ಪಕ್ಕಾ ಹಾಡಿಗೆ ನೃತ್ಯ ಮಾಡಿದರು. ಪ್ರಾಥಮಿಕ ಶಾಲಾ ಮಕ್ಕಳು ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಹಾಡಿಗೆ ಹೆಜ್ಜೆ ಹಾಕಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಹಾಡಿಗೆ ನೃತ್ಯ ಮಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಕ್ಷಕ ಮಲ್ಲಿಕಾರ್ಜುನ ಹಾಗೂ ಸುಜಾತಾ ಕಾರ್ಯಕ್ರಮದ ನಿರೂಪಿಸಿದರು. ಕೊನೆಯಲ್ಲಿ ಮಂಜುನಾಥ್ ದೊಡ್ಡಮನಿ ವಂದನಾರ್ಪಣೆ ಮಾಡಿದರು.

ಇದನ್ನೂ ಓದಿ| ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಲು ಶಿಕ್ಷಣ ಸಚಿವರ ಸೂಚನೆ

Exit mobile version