Site icon Vistara News

ವಿಜ್ಞಾನದಲ್ಲಿನ ಎಷ್ಟೋ ವಿಷಯಗಳನ್ನು ನಮ್ಮ ಋಷಿಮುನಿಗಳು ಅಂದೇ ಹೇಳಿದ್ದರು: ನವೀನ ಶಾಸ್ತ್ರಿ ಪುರಾಣಿಕ

naveen shastri puranik

ಧಾರವಾಡ: ಇಂದು ವಿಜ್ಞಾನ ಕ್ಷೇತ್ರ ಸಂಶೋಧಿಸಿರುವ ಎಷ್ಟೋ ವಿಷಯಗಳನ್ನು ನಮ್ಮ ಋಷಿ ಮುನಿಗಳು ಅಂದೇ ಹೇಳಿದ್ದರು. ಆದರೆ ಅವುಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಲ್ಲಿ ನಾವು ವಿಫಲರಾಗಿದ್ದರಿಂದಷ್ಟೇ ಇಂದು ವಿಜ್ಞಾನ ಮೇಲುಗೈ ಸಾಧಿಸಿದೆ ಎಂದು ಸಂಸ್ಕೃತಿ ಚಿಂತಕ, ಸಂಸ್ಕೃತ ಉಪನ್ಯಾಸಕ ವಿದ್ವಾನ್ ನವೀನ ಶಾಸ್ತ್ರಿ ಪುರಾಣಿಕ ಹೇಳಿದ್ದಾರೆ.

ಅವರು ಗೋವಾದ “ಭಕ್ತಿ ಪರಂಪರಾ ಗೋವಾʼʼ ಆಯೋಜಿಸಿದ್ದ ವರ್ಚುವಲ್‌ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಂಸ್ಕೃತ ವಾಙಮಯದಲ್ಲಿ ವಿಜ್ಞಾನ” ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

ಇಂದು ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಇದಕ್ಕೆ ನಮ್ಮ ಋಷಿಮುನಿಗಳು ಕೊಟ್ಟ ಕೊಡುಗೆಯೂ ಕಾರಣವಾಗಿದೆ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಏಕೆಂದರೆ ನಮ್ಮಲ್ಲಿರುವ ಪುರಾಣ-ಪುಣ್ಯ ಕತೆಗಳಲ್ಲಿ ಬರುವ ವಿಷಯಗಳನ್ನೇ ಇಂದು ವಿಜ್ಞಾನಿಗಳು ತಮ್ಮ ಸಂಶೋಧನೆ ಎಂದು ಮುಂದಿಡುತ್ತಿದ್ದಾರೆ ಎಂದು ವಿವರಿಸಿದರು.

ಸಂಸ್ಕೃತದ ಗ್ರಂಥಗಳಲ್ಲಿನ ವಿಷಯಗಳನ್ನು ಆಳವಾದ ಅಧ್ಯಯನ ಮಾಡದೇ ಇರುವುದರಿಂದ ವಿಜ್ಞಾನದಲ್ಲಿ ನಮಗೆ ಮುಂದುವರಿಯಲು ಸಾಧ್ಯವಾಗಿಲ್ಲ. ಆದರೆ ವಿದೇಶಿಗರು ಈ ಕೆಲಸ ಮಾಡುತ್ತಿದ್ದಾರೆ. ಪ್ರಾಚೀನ ಋಷಿಗಳು ಕೊಟ್ಟ ಅನೇಕ ಸೂತ್ರಗಳ ಬಳಕೆಯನ್ನು ಅವರು ಮಾಡಿಕೊಂಡಿದ್ದಾರೆ ಎಂದು ಹೇಳಿದ ಅವರು, ನಮ್ಮ ಶಿಕ್ಷಣ ಪದ್ಧತಿಯೇ ನಾವು ನಮ್ಮ ಜ್ಞಾನ ಸಂಪತ್ತನ್ನು ಸರಿಯಾಗಿ ಬಳಸದೇ ಇರಲು ಕಾರಣವಾಗಿದೆ ಎಂದರು.

ಈಗ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಅಧ್ಯಯನಕ್ಕೆ ಒಳಪಡಿಸುವ ಕೆಲಸ ಮಾಡಲಿದೆ. ಇದು ನಾವೆಲ್ಲರೂ ಸಂತೋಷ ಪಡುವ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು. ಉಪನ್ಯಾಸದಲ್ಲಿ ಸಂಸ್ಕೃತ ವಾಙಮಯದಲ್ಲಿ ಬರುವ ಅನೇಕ ವಿಜ್ಞಾನದ ಉಲ್ಲೇಖಗಳನ್ನು ಉದಾಹರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಂಕೋಲಾದ ಸ್ನೇಹಾ ಖೇಣಿ,ಕೆ. ಎಸ್. ಶಾರದಾ, ಗೋಕರ್ಣದ ಸಂಗೀತಾ ಗೋಕರ್ಣ, ವಿದ್ಯಾ ಶೆಟ್ಟಿ ಅವರು ಪ್ರಾರ್ಥನೆ ಮಾಡಿದರು. ಮಮತಾ ಕಾರವಾರಕರ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಶೆಟ್ಟಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ವಾನ್ ಮಹಾಬಲ ಭಟ್ ಸೇರಿದಂತೆ ಅನೇಕ ಸಂಸ್ಕೃತ ವಿದ್ವಾಂಸರು, ಆಸಕ್ತರು ಭಾಗವಹಿಸಿದ್ದರು.

ಇದನ್ನೂ ಓದಿ|Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Exit mobile version