Site icon Vistara News

ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಡಿಜಿಟಲ್ ಹೆಲ್ತ್ ಯೋಜನೆ; ರಾಜ್ಯ ಕಾರ್ಮಿಕ ಇಲಾಖೆಯಿಂದ ಜಾರಿ

ಕಾರ್ಮಿಕ

ಬೆಂಗಳೂರು: ಜಾಗತಿಕ ಸಾಂಕ್ರಾಮಿಕ ಕೋವಿಡ್-19 ಸಂದರ್ಭದಲ್ಲಿ ಶ್ರಮಿಕರು ಮತ್ತು ಕುಟುಂಬಸ್ಥರು ವೈದ್ಯರನ್ನು ತಲುಪಲಾಗದೆ ಪರದಾಡಿದ ಸಂದರ್ಭ ಮರುಕಳಿಸದಂತೆ ತಡೆಯುವ ಸಲುವಾಗಿ ರಾಜ್ಯ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಶ್ರಮಿಕ ವರ್ಗಕ್ಕೆ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸಲು ಮುಂದಡಿ ಇರಿಸಿದೆ.

ನಗರದ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು “ಡಿಜಿಟಲ್ ಟೆಲಿ ಹೆಲ್ತ್ ಮತ್ತು ಟೆಲಿ ಮೆಡಿಸನ್ ಸೇವೆ”ಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಸಂಬಂಧ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಜತೆ ಶುಕ್ರವಾರ ಒಡಂಬಡಿಕೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್, ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನ ಇಂದಿರಾನಗರ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ (ESI Hospital) ವ್ಯಾಪ್ತಿಯಲ್ಲಿ 8 ಚಿಕಿತ್ಸಾಲಯ ಮತ್ತು ಹುಬ್ಬಳ್ಳಿ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ ವ್ಯಾಪ್ತಿಯಲ್ಲಿ 5 ಕಾರಾವಿ ಚಿಕಿತ್ಸಾಲಯಗಳಲ್ಲಿ ಡಿಜಿಟಲ್ ಹೆಲ್ತ್ ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | ನವೆಂಬರ್‌ 1ಕ್ಕೆ ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬೊಮ್ಮಾಯಿ ಘೋಷಣೆ

ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಮಯ ಮತ್ತು ಪ್ರಯಾಣದ ಬವಣೆ ಪರಿಹಾರದ ಜತೆಗೆ ರೋಗಿಗಳಿಗೆ ತ್ವರಿತ, ಬದ್ಧ, ಶುದ್ಧ ಮತ್ತು ಸಿದ್ದಿ ಚಿಕಿತ್ಸೆ ಇದರಿಂದ ಲಭ್ಯವಾಗಲಿದ್ದು, ಇದೊಂದು ಉತ್ತಮ ಜನಸ್ನೇಹಿ ಸೇವೆ ಆಗಲಿದೆ ಎಂದ ಸಚಿವರು, ಈ ಯೋಜನೆಯಡಿ ರೋಗಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹತ್ತಿರದ ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ತರಬೇತಿ ಪಡೆದ ಸಿಬ್ಬಂದಿ ಸಹಾಯದಿಂದ ಕೇಂದ್ರ ಸ್ಥಾನದಲ್ಲಿನ ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ, ಚಿಕಿತ್ಸೆ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.

ಸಭೆಯಲ್ಲಿ ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮನೋಜ್ ಜೈನ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ, ರೈಲ್ ಟೆಲ್ ಅಧಿಕಾರಿಗಳು, ಇಎಸ್‌ಐ ನಿರ್ದೇಶನಾಲಯದ ಡಾ. ನಾರಾಯಣ ಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

ಕೋವಿಡ್-19 ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. 2020ರ ಸ್ವಾತಂತ್ರೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು, “ಡಿಜಿಟಲ್ ಹೆಲ್ತ್” ಯೋಜನೆ ಅನುಷ್ಠಾನದ ಇಂಗಿತ ವ್ಯಕ್ತಪಡಿಸಿದ್ದರು. ಅವರ ಆಶಯದಂತೆ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಇಲಾಖೆ ಮುಂದಾಗಿದೆ. ಶ್ರಮಿಕ ವರ್ಗದ ಆರೋಗ್ಯ ಕಾಳಜಿ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ “ಡಿಜಿಟಲ್ ಹೆಲ್ತ್” ಯೋಜನೆ ಜಾರಿಗೆ ಮುಂದಾಗಿದ್ದೇವೆ.
| ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು

ಇದನ್ನೂ ಓದಿ | ಆರ್ಥಿಕ ನೆರವಿಗಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಆ.15ಕ್ಕೆ ಸಿಎಂ ಮನೆ ಮುತ್ತಿಗೆಗೆ ನಿರ್ಧಾರ

Exit mobile version