ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದು, ಬರ ಬಂದು ಜನರು ಸಾಯುತ್ತಿರುವಾಗ ಬರಲಿಲ್ಲ, ನೆರೆ ಬಂದಾಗ ಪರಿಹಾರವನ್ನೂ ಕೊಡಲಿಲ್ಲ. ಈಗ ಚುನಾವಣಾ ಸಮಯಕ್ಕೆ ಮೋದಿ ಅವರಿಗೆ ಕರ್ನಾಟಕ ನೆನಪಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ವಿವಿಧ ಯೋಜನೆಗಳು, ಜಿಎಸ್‌ಟಿ ವಿಷಯಗಳನ್ನು ಪ್ರಸ್ತಾಪ ಮಾಡಿರುವ ದಿನೇಶ್ ಗುಂಡೂರಾವ್, ಸರಣಿ ಟ್ವೀಟ್‌ಗಳ ಮೂಲಕ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಟ್ವೀಟ್‌ಗಳ ವಿವರವನ್ನು ಇಲ್ಲಿ ಕೊಡಲಾಗಿದೆ.
ಸರಣಿ ಟ್ವೀಟ್‌ನಲ್ಲೇನಿದೆ?
೧. ಪ್ರಧಾನಿ ಮೋದಿ ಇಂದು ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರಿಗೆ ಸ್ವಾಗತ. ಆದರೆ, ನೆರೆ ಬಂದು ರಾಜ್ಯದ ಜನರು ಕೊಚ್ಚಿ ಹೋಗುವಾಗ ಮೋದಿ ಬರಲಿಲ್ಲ. ಬರ ಬಂದು ಜನ ಸಾಯುತ್ತಿರುವಾಗಲೂ ಬರಲಿಲ್ಲ. ನೆರೆ ಪರಿಹಾರವನ್ನು ಕೊಡಲಿಲ್ಲ. ಅತ್ತ ಬರ ಪರಿಹಾರ ಕೊಡಲಿಲ್ಲ. ಈಗ ಚುನಾವಣಾ ಸಮಯ ಬಂದಿದೆ. ಚುನಾವಣೆಯ ಸಮಯದಲ್ಲೇ ಮೋದಿಯವರಿಗೆ ಕರ್ನಾಟಕದ ನೆನಪಾಗುತ್ತದೆಯೇ?
2. ಇತ್ತೀಚೆಗೆ ಪ್ರಧಾನಿ ಮೋದಿ ರಾಜ್ಯಕ್ಕೆ ಪದೇ ಪದೆ ಭೇಟಿ ಕೊಡುತ್ತಿದ್ದಾರೆ. ಚುನಾವಣೆ ಇಲ್ಲದೆ ಹೋಗಿದ್ದರೆ ಮೋದಿ ಹೀಗೆ ಭೇಟಿ ಕೊಡುತ್ತಿದ್ದರೇ? 2019ರಲ್ಲಿ ಮೋದಿಯವರ ಮುಖ ನೋಡಿ ರಾಜ್ಯದ ಜನ 25 BJP ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದರು. ಪ್ರತ್ಯುಪಕಾರವಾಗಿ ರಾಜ್ಯಕ್ಕೆ ಮೋದಿಯವರ ಕೊಡುಗೆಯೇನು? ಮೋದಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ.
3. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಜಿಎಸ್‌ಟಿ ನಷ್ಟ ಪರಿಹಾರ ಕೊಡದಿದ್ದಾಗ ಮೋದಿಯವರಿಗೆ ಕರ್ನಾಟಕ ನೆನಪಾಗಲಿಲ್ಲ. 5 ಸಾವಿರ ಕೋಟಿ ಜಿಎಸ್‌ಟಿ ಬಾಕಿ ಕೊಡದಿದ್ದಾಗ ಕರ್ನಾಟಕ ನೆನಪಾಗಲಿಲ್ಲ. ಮಹದಾಯಿ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಲ್ಲಿ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿರುವಾಗ ಕರ್ನಾಟಕ ನೆನಪಾಗಲಿಲ್ಲ. ಈಗ ಚುನಾವಣೆ ಬಂದೊಡೆನೆಯೇ ಈ ಸುಳ್ಳು ಪ್ರೇಮ ಯಾಕೆ? ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.